ಸ್ವಾಭಿಮಾನಿ ವಿಜಯೋತ್ಸವದಲ್ಲಿ ನಟ ಯಶ್​ ಸ್ಟೀಮ್​ ಇಂಜಿನ್ ಬೋಟ್​ ಕತೆ ಹೇಳಿದ್ದೇಕೆ?

ಮಂಡ್ಯ: ಅಂಬರೀಷಣ್ಣನ ಜನ್ಮದಿನ ಇಂದು ಇದೆ. ಆದರೆ, ನೀವೆಲ್ಲ ಸೇರಿ ಮೇ 23ಕ್ಕೇ ಉಡುಗೊರೆ ಕೊಟ್ಟಾಗಿದೆ. ನಿಮಗೆಲ್ಲ ಹೇಗೆ ಧನ್ಯವಾದ, ಕೃತಜ್ಞತೆ ಸಲ್ಲಿಸಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ನಟ ಯಶ್​ ಹೇಳಿದರು.

ಸಿಲ್ವರ್ ಜ್ಯುಬಿಲಿ ಪಾರ್ಕ್​ನಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ವಿಜಯೋತ್ಸವ, ಅಂಬರೀಷ್​ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಸುಮಲತಾ ಅಮ್ಮನವರು ಮಾಡಿದ್ದು ಸಾಮಾನ್ಯ ಹೋರಾಟವನ್ನಲ್ಲ. ಅವರು ಈ ಮಂಡ್ಯದ ಜನರನ್ನು ನಂಬಿದ್ದರು. ಎಲ್ಲರೂ ನಾವೇನೋ ಮಹಾನ್​ ಸಾಧನೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಆದರೆ, ನಾವು ನಮ್ಮ ಕಾಮನ್​ ಸೆನ್ಸ್​ ಬಳಸಿಕೊಂಡಿದ್ದೇವಷ್ಟೇ. ಜನರ ದನಿ ಅರ್ಥ ಮಾಡಿಕೊಂಡಿದ್ದೇವೆ. ಇಲ್ಲಿನ ಜನರಿಗೆ ಸುಮಲತಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಆಶಯವಿತ್ತು. ಸುಮಲತಾ ಅಮ್ಮನವರ ಜತೆ ಮನೆ ಮಕ್ಕಳಾಗಿ ನಾವು ನಿಂತೆವು ಎಂದು ಹೇಳಿದರು.

ಕತೆ ಹೇಳಿ ತಿರುಗೇಟು ಕೊಟ್ಟ ಯಶ್​

ಇದೇ ವೇಳೆ ಸುಮಲತಾ ಅವರ ಚುನಾವಣಾ ಪ್ರವೇಶದ ಹಾದಿಯನ್ನು ಒಂದು ಕತೆ ಹೇಳುವ ಮೂಲಕ ಯಶ್​ ವರ್ಣಿಸಿದರು. ಅಲ್ಲದೆ, ಎದುರಾಳಿಗಳಿಗೆ ತಿರುಗೇಟು ಕೊಟ್ಟರು.

ಮೊದಲನೇ ಸಲ ಜಗತ್ತಿನಲ್ಲಿ ಸ್ಟೀಮ್​ ಇಂಜಿನ್​ ಬೋಟ್​ ತಯಾರಿಸಿದರಂತೆ. ಎಲ್ಲರೂ ಬಂದು ಅದನ್ನು ನೋಡಿದರಂತೆ. ಆದರೆ ನೋಡುವವರು ಸುಮ್ಮನಿರದೆ ಸ್ಟೀಮ್​ ಇಂಜಿನ್​ ಬಗ್ಗೆ ಟೀಕಿಸಲು ಪ್ರಾರಂಭಿಸಿದರಂತೆ. ಅಲ್ಲ, ಸ್ಟೀಮ್​ ಇಂಜಿನ್ ಸ್ಟಾರ್ಟ್​ ಆಗತ್ತಾ? ಚಾನ್ಸೇ ಇಲ್ಲ ಎಂದು ಹೇಳುತ್ತಿದ್ದರಂತೆ.

ನೋಡನೋಡುತ್ತಿದ್ದಂತೆ ಅದು ಸ್ಟಾರ್ಟ್​ ಆಗಿಯೇ ಬಿಟ್ಟಿತಂತೆ. ಮತ್ತೆ ಆ ಜನರೆಲ್ಲ ಸುಮ್ಮನಿರದೆ, ಏನೋ ಸ್ಟಾರ್ಟ್​ ಆಗಿರಬಹುದು. ಆದರೆ, ಮೂವ್​ ಆಗೋದಿಲ್ಲ ಎಂದು ಹೇಳಿದರಂತೆ. ಆದರೆ, ಆ ಬೋಟು ಚಲಿಸಲೂ ಪ್ರಾರಂಭಿಸಿತಂತೆ. ಅದನ್ನು ನೋಡಿಕೊಂಡು ಸುಮ್ಮನಿರಬೇಕು ತಾನೆ, ಬಾಯಿಗೆ ಮಣ್ಣು ಹಾಕಾ ಮತ್ತೆ ಟೀಕಿಸಿದರಂತೆ. ಆ ಬೋಟು ಎಲ್ಲೋ ಗುದ್ದುಬಿಡತ್ತೆ, ಮುಳುಗಿ ಬಿಡುತ್ತೆ ಎಂದರಂತೆ. ಆದರೆ, ನೆನಪಿಟ್ಟುಕೊಳ್ಳಿ ಸ್ಟೀಮ್​ ಬೋಟ್​ ನಡೀತಾನೇ ಇದೆ, ಪ್ರಯಾಣ ನಡೀತಾನೇ ಇದೆ ಎಂದು ಯಶ್​ ತಿರುಗೇಟು ಕೊಟ್ಟರು.

ವಿರೋಧಿಗಳಲ್ಲ ಪ್ರತಿಸ್ಪರ್ಧಿಗಳು

ನಮ್ಮನ್ನೆಲ್ಲ ವಿರೋಧಿಗಳು ಎಂಬಂತೆ ಕೆಲವರು ಮಾತಾಡುತ್ತಿದ್ದರು. ಆದರೆ, ನಾವು ಅವರನ್ನು ವಿರೋಧಿಗಳು ಎಂದು ಭಾವಿಸಿಲ್ಲ. ಪ್ರತಿಸ್ಪರ್ಧಿಗಳು ಅಷ್ಟೇ. ಈ ಚುನಾವಣೆ ಹಂತದಲ್ಲಿ ಯಾರ್ಯಾರು ಎಷ್ಟು ಟೀಕೆ ಮಾಡಿದ್ದಾರೆ. ಹೆಣ್ಣಿನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಾಗೇ ಟೀಕೆ ಮಾಡಿದವರೇ ನಮ್ಮ ಪರವಾಗಿ ಹೆಚ್ಚು ಕೆಲಸ ಮಾಡಿದ್ದಾರೆ. ಇನ್ನಾದರೂ ಅದನ್ನೆಲ್ಲ ಬಿಡಿ. ಫಲಿತಾಂಶ ಗೊತ್ತಾಯಿತಲ್ಲ ಎಂದು ಯಶ್​ ಹೇಳಿದರು.

ಅಮ್ಮಂಗೆ ಮಾರ್ಗದರ್ಶನ ಮಾಡಿ

ಸುಮಲತಾ ಅಮ್ಮ ನಿಮ್ಮೆಲ್ಲರ ಪ್ರೀತಿ ಗಳಿಸಿದ್ದಾರೆ. ಪ್ರತಿಸ್ಪರ್ಧಿಗಳಿಗೆ ಮತ ಹಾಕಿದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ನಂಬಿಕೆ ಗಳಿಸುತ್ತಾರೆ. ಹಿರಿಯರು ಮಾರ್ಗದರ್ಶನ ಮಾಡಿ. ಅವರು ಎಲ್ಲ ಕೆಲಸವನ್ನೂ ಮಾಡಿಕೊಡುತ್ತಾರೆ. ಆದರೆ, ಎಲ್ಲ ಎಂಪಿ, ಸಚಿವರು, ಎಂಎಲ್​ಎಗಳಿಗೆ ಆಗುವ ಒಂದು ತೊಂದರೆಯೇನೆಂದರೆ ಅನೇಕ ಜನರು ತಮ್ಮ ಮನೆಯ ಮದುವೆ, ಹುಟ್ಟುಹಬ್ಬ ಮತ್ತಿತರ ಸಂಭ್ರಮದ ಕಾರ್ಯಕ್ರಮಕ್ಕೆ ಬರಲಿ ಎಂದು ಬಯಸಿ ಒತ್ತಾಯಿಸುತ್ತಾರೆ. ಹಾಗೊಮ್ಮೆ ಬರದೆ ಇದ್ದರೆ, ಅವರು ಬರಲಿಲ್ಲ ಮುಂದಿನ ಬಾರಿ ಮತ ಹಾಕಬಾರದು ಎಂಬ ತೀರ್ಮಾನಕ್ಕೆ ಬರುತ್ತಾರೆ. ದಯವಿಟ್ಟು ಹಾಗೆ ಭಾವಿಸಬೇಡಿ. ರಾಜಕಾರಣಿಗಳು ಮಾಡಲು ಬೇರೆ ಕೆಲಸಗಳು ಇವೆ. ಅದನ್ನು ಮಾಡಿಸೋಣ. ನಮ್ಮ ವೈಯಕ್ತಿಕ ಕೆಲಸಗಳನ್ನು ನಾವೇ ಮಾಡಿಕೊಳ್ಳೋಣ ಎಂದು ಹೇಳಿದರು.

ವೇದಿಕೆಗೆ ಬರುತ್ತಿದ್ದಂತೆ ಹ್ಯಾಪಿ ಬರ್ತ್​ ಡೇ ಅಂಬರೀಷಣ್ಣ ಎಂದು ಕೂಗಿ ಯಾವತ್ತಿಗೂ ನೀವೇ ಮಂಡ್ಯದ ಗಂಡು ಎಂದು ಹೇಳಿದರು.

Leave a Reply

Your email address will not be published. Required fields are marked *