ನಟನಾಗಿನ ಭಾವನೆ ಹೇಳುವುದಕ್ಕಿಂತ ಅಪ್ಪ ಆಗಿದ್ದಕ್ಕೆ ತುಂಬ ಖುಷಿಯಿದೆ: ನಟ ಯಶ್‌

ಬೆಂಗಳೂರು: ನಟನಾಗಿ ಭಾವನೆ ವ್ಯಕ್ತಪಡಿಸುವುದು ಬೇರೆ. ಆದರೆ ಈಗ ಅಪ್ಪ ಆಗಿದ್ದಕ್ಕೆ ತುಂಬಾನೆ ಖುಷಿ ತಂದಿದೆ. ಈ ಭಾವನೆ, ಅನುಭವ ಹೇಳಲು ಸಾಧ್ಯವೇ ಇಲ್ಲ. ಹೆಣ್ಣು ಮಗು ಆಗಿದ್ದು ನನಗೆ ಸಖತ್ ಖುಷಿ ತಂದಿದೆ ಎಂದು ನಟ ಯಶ್‌ ತಿಳಿಸಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯಿಂದ ರಾಧಿಕಾ ಡಿಸ್ಚಾರ್ಜ್ ಹಿನ್ನೆಲೆಯಲ್ಲಿ ಯಶ್ ಮತ್ತು ರಾಧಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೊದಲು ಅಭಿಮಾನಿಗಳಿಗೆ ಹಾಗೂ ಮಾಧ್ಯಮದವರಿಗೆ ಧನ್ಯವಾದಗಳು. ಮಗು ಹುಟ್ಟುದಾಗಿನಿಂದಲೂ ಎಲ್ಲರೂ ಬಂದಿದ್ದೀರ. ಎಲ್ಲ ಅಭಿಮಾನಿಗಳಿಗೆ ವಿಷಯ ತಿಳಿಸಿದ್ದೀರ, ಎಲ್ಲರ ಖುಷಿಗೆ ಕಾರಣ ನೀವು. ಇದೊಂತರ ವಿಶೇಷ ಅನುಭವ ಎಂದು ಹೇಳಿದರು.

ಇವತ್ತು ನಮ್ಮ ಮದುವೆಯಾಗಿ ಎರಡು ವರ್ಷ ಆಯ್ತು. ನನಗೆ ಹೆಣ್ಣು ಮಗು ಆಗಬೇಕು ಎನ್ನುವ ಆಸೆಯಂತೆ ಹೆಣ್ಣುಮಗು ಆಗಿರುವುದು ಖುಷಿ ತಂದಿದೆ. ನಮ್ಮ ಕುಟುಂಬಕ್ಕೂ ಹೆಣ್ಣು ಮಗು ಮನೆಗೆ ಬಂದಿರುವುದು ಖುಷಿಯಾಗಿದೆ. ರಾಧಿಕಾಗೆ ಗಂಡು ಮಗು ಅಂದರೆ ಇಷ್ಟ ಹಾಗಾಗಿ ಹೆಸರನ್ನೂ ಕೂಡಾ ಸೆಲೆಕ್ಟ್ ಮಾಡಿಕೊಂಡಿದ್ದರು. ನನಗೆ ಹೆಣ್ಣು ಮಗು ಆಗಲಿ ಎಂದು ಆಸೆಯಿತ್ತು ಈಗ ಹೆಸರಿಡುವ ಕುರಿತು ಯೋಚಿಸುತ್ತಿದ್ದೇನೆ ಎಂದು ಹೇಳಿದರು.

ಎರಡು ವರ್ಷಗಳ ಹಿಂದೆ ಇದೇ ದಿನ ಮದುವೆ ಆಗಿದ್ದ ಯಶ್ ರಾಧಿಕಾಗೆ ಇಂದು ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮ. ಇದೇ ದಿನ ರಾಧಿಕಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ಡಿ. 2ರಂದು ಹೆಣ್ಣು ಮಗುವಿಗೆ ರಾಧಿಕಾ ಜನ್ಮ ನೀಡಿದ್ದರು. (ದಿಗ್ವಿಜಯ ನ್ಯೂಸ್)