More

    ಉಪ್ಪಿ-ಚಂದ್ರು ಕಬ್ಜದಲ್ಲಿ ಮಿನರ್ವ ಮಿಲ್ಸ್: ಎಂಟು ಸೆಟ್​ಗಳಲ್ಲಿ ಹಗಲಿರುಳು ಶೂಟಿಂಗ್

    ಬೆಂಗಳೂರು: ‘ಒಳಗೆ ಪ್ರವೇಶಿಸುತ್ತಿದ್ದಂತೆ ಹಿಂಡು ಹಿಂಡು ಜನ, ಅವರ ಕೈಯಲ್ಲಿ ಪಿಸ್ತೂಲ್-ಬಂದೂಕು, ಉಸಿರುಗಟ್ಟಿಸುವ ವಾತಾವರಣ, ಮಂದ ಬೆಳಕು, ಉರಿಯುವ ದೊಂದಿ, ಬಂದೂಕಿನಿಂದ ಸಿಡಿಯುವ ಬೆಂಕಿ ಕಿಡಿ..’ ಇದೆಲ್ಲ ಕಂಡುಬಂದಿದ್ದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿನ ಮಿನರ್ವ ಮಿಲ್ಸ್​ನಲ್ಲಿ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ, ಉಪ್ಪಿ-ಚಂದ್ರು.

    ಹೌದು.. ಕಳೆದೊಂದು ವಾರದಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಮಿನರ್ವ ಮಿಲ್ಸ್ ಅನ್ನು ತಮ್ಮ ‘ಕಬ್ಜ’ಕ್ಕೆ ತೆಗೆದುಕೊಂಡಿದ್ದಾರೆ. ಅರ್ಥಾತ್, ಆರ್. ಚಂದ್ರು ನಿರ್ವಣ-ನಿರ್ದೇಶನ ಹಾಗೂ ಉಪೇಂದ್ರ ಅಭಿನಯದಲ್ಲಿ ಮೂಡಿಬರುತ್ತಿರುವ ‘ಕಬ್ಜ’ ಸಿನಿಮಾದ ಚಿತ್ರೀಕರಣ ಮಿನರ್ವ ಮಿಲ್ಸ್ ನಲ್ಲಿ ನಡೆಯುತ್ತಿದ್ದು, ಅಲ್ಲಿ ಅದಕ್ಕೆಂದೇ ಪಬ್, ಮಟನ್ ಬಜಾರ್​ನಂಥ ವಿಶೇಷವಾದ ಸೆಟ್​ಗಳನ್ನು ಹಾಕಲಾಗಿದೆ. ಹಳೇ ಕಾಲದ ಭೂಗತ ಜಗತ್ತನ್ನು ನೆನಪಿಸುವ, ಆಗಿನ ಕಾಲದಲ್ಲಿದ್ದಂಥದ್ದೇ ಉಡುಪು ಧರಿಸಿ ರೌಡಿಗಳ ಗೆಟಪ್​ನಲ್ಲಿರುವ ಕಲಾವಿದರ ತಂಡೋಪತಂಡದ ಮಧ್ಯೆ ವಿಶಿಷ್ಟ ಗೆಟಪ್​ನಲ್ಲಿ ಭೂಗತ ದೊರೆಯಂತೆ ಕಾಣಿಸುವ ಪಾತ್ರದಲ್ಲಿ ಉಪೇಂದ್ರ ಅಭಿನಯದ ದೃಶ್ಯಗಳಿಗೆ ಚಂದ್ರು ಅಲ್ಲಿ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಹೀಗೆ ವಿಭಿನ್ನವಾಗಿ ಚಿತ್ರೀಕರಣ ನಡೆಯುತ್ತಿರುವ ‘ಕಬ್ಜ’ ಸೆಟ್​ಗೆ ಮಾಧ್ಯಮದವರನ್ನು ಆಹ್ವಾನಿಸಿದ್ದ ಚಂದ್ರು, ಜೂಜಿನ ಅಡ್ಡೆಯಂಥಿದ್ದ ಪಬ್​ನಂಥ ಸೆಟ್​ವೊಂದನ್ನು ತೋರಿಸಿ ಶೂಟಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡರು.

    ‘ಇದು 1947ರ ನಂತರದಿಂದ 1980-90ರ ದಶಕದ ವರೆಗಿನ ಕಥೆ ಹೊಂದಿರುವುದರಿಂದ, ರೆಟ್ರೊ ಶೈಲಿಯಲ್ಲಿ ಚಿತ್ರೀಕರಿಸಬೇಕಾದ್ದರಿಂದ ವಿಭಿನ್ನವಾದ ಸೆಟ್​ಗಳನ್ನು ಹಾಕಲಾಗಿದೆ. ಇಲ್ಲಿ 30-35 ದಿನಗಳ ಷೆಡ್ಯೂಲ್ ಹಾಕಿಕೊಳ್ಳಲಾಗಿದ್ದು, ಒಂದು ವಾರದಿಂದ ರಾತ್ರಿ ಹಗಲೆನ್ನದೆ ಶೂಟಿಂಗ್ ನಡೆಯುತ್ತಿದೆ. ರೆಟ್ರೊ ಕಥೆ ಆಗಿರುವುದರಿಂದ ಹೊರಾಂಗಣದಲ್ಲಿ ಶೂಟಿಂಗ್ ಮಾಡಿದರೆ ಸಹಜತೆ ಇರುವುದಿಲ್ಲ ಎಂಬ ಕಾರಣಕ್ಕೆ ಸೆಟ್ ಹಾಕಿಸಲಾಗಿದೆ’ ಎಂದರು ಚಂದ್ರು. ಕಲಾ ನಿರ್ದೇಶಕ ಶಶಿಕುಮಾರ್ ಈ ಸೆಟ್​ಗಳನ್ನು ವಿನ್ಯಾಸ ಮಾಡಿದ್ದು, ರವಿವರ್ಮ ಸಾಹಸ ಸಂಯೋಜನೆಯಲ್ಲಿ ಫೈಟ್ ಸೀನ್ಸ್ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ನಟ ಉಪೇಂದ್ರ, ಜಾನ್ ಕೊಕೆನ್ ಮುಂತಾದವರು ಸೇರಿ ಹಲವರ ಅಭಿನಯದಲ್ಲಿ ಇಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ ಎಂದರು.

    ಒಂದೊಂದು ಎಪಿಸೋಡ್ ಕೂಡ ಅಪರೂಪದ ಅನುಭವ ನೀಡುತ್ತಿದೆ. ಈ ಶೂಟಿಂಗ್ ಕ್ಷಣಗಳನ್ನು ಅನುಭವಿಸುವುದೇ ದೊಡ್ಡ ಖುಷಿ. ಈ ಶೂಟಿಂಗ್ ನಾನು ‘ಓಂ’ ಸಿನಿಮಾ ಮಾಡುತ್ತಿದ್ದಾಗ ಸಿಕ್ಕ ಅನುಭವವನ್ನೇ ನೀಡುತ್ತಿದೆ.

    | ಉಪೇಂದ್ರ ನಾಯಕ ನಟ

    ಕನ್ನಡ ಚಿತ್ರರಂಗವನ್ನು ಈಗಾಗಲೇ ಹಲವರು ಒಂದೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ಚಿತ್ರದ ಮೂಲಕ ನಾನೂ ಇಂಡಸ್ಟ್ರಿಯನ್ನು ಬೇರೆಯದೇ ಹಂತಕ್ಕೆ ಕೊಂಡೊಯ್ಯುವ ಕನಸು ಹೊಂದಿದ್ದೇನೆ. ಏಳು ಭಾಷೆಗಳಲ್ಲಿ ಮೂಡಿಬರಲಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಒಂದು ಮೈಲಿಗಲ್ಲು ಆಗಲಿದೆ.

    | ಆರ್.ಚಂದ್ರು ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts