ಚುನಾವಣೇಲಿ ಗೆದ್ದರೆ ನಟನೆಗೆ ಗುಡ್‌ಬೈ

ದಾವಣಗೆರೆ: ನಾನು ಚುನಾವಣೆಗೆ ಸ್ಪರ್ಧಿಸಿದರೆ, ಜನರು ಗೆಲ್ಲಿಸಿದರೆ ಆಗಿನಿಂದಲೇ ನಾನು ಪ್ರಜೆಗಳ ಸೇವಕ. ಎರಡೂ ಕ್ಷೇತ್ರ ಒಟ್ಟಿಗೆ ನಿರ್ವಹಿಸಲಾಗದು. ಆಗ ಸಿನಿಮಾ ರಂಗ ಬಿಡುವುದು ಅನಿವಾರ್ಯ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ಚಿತ್ರನಟ ಉಪೇಂದ್ರ ಹೇಳಿದರು.ಸದ್ಯಕ್ಕೆ ನಾನು ಒಪ್ಪಿಕೊಂಡಿರುವ ಸಿನಿಮಾಗಳನ್ನು ನಿರ್ವಹಿಸುತ್ತಿದ್ದೇನೆ. ರಾಜಕಾರಣ ಕೈಹಿಡಿದರೆ ಅದುವೇ ನನ್ನ ಸಂಪಾದನೆ. ಎರಡೂ ಕ್ಷೇತ್ರ ಒಟ್ಟಿಗೆ ನಿರ್ವಹಿಸಲಾಗದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಸದ್ಯಕ್ಕೆ ನಾನು ಒಪ್ಪಿಕೊಂಡಿರುವ ಸಿನಿಮಾಗಳನ್ನು ನಿರ್ವಹಿಸುತ್ತಿದ್ದೇನೆ. ರಾಜಕಾರಣ ಕೈಹಿಡಿದರೆ ಅದುವೇ ನನ್ನ ಸಂಪಾದನೆ. ಎರಡೂ ಕ್ಷೇತ್ರ ಒಟ್ಟಿಗೆ ನಿರ್ವಹಿಸಲಾಗದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ವಿಧಾನಸಭೆಗೆ ಸ್ಪರ್ಧಿಸುವ ಆಲೋಚನೆ ಇತ್ತು. ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಲೋಕಸಭೆ ಕಣದಲ್ಲಿ ಅಭ್ಯರ್ಥಿಗಳೇ ಸಿಗದಿದ್ದಲ್ಲಿ ಸ್ವತಃ ಕಣಕ್ಕಿಳಿಯುವ ಆಲೋಚನೆ ಮಾಡುತ್ತೇನೆ. ಸದ್ಯಕ್ಕೆ ಅಭ್ಯರ್ಥಿಗಳ ಆಯ್ಕೆಗಾಗಿ ಓಡಾಟವೇ ಹೆಚ್ಚಿದೆ.

ಯುವಜನರು ಚುನಾವಣೆಗೆ ಸ್ಪರ್ಧಿಸಿದರೆ ಸೋಲುವ ಭಯದಲ್ಲಿದ್ದಾರೆ ಹೊರತು ದಾರಿ ತಪ್ಪಿಲ್ಲ. ಇಂದಿನ ರಾಜಕೀಯದಲ್ಲಿ ವ್ಯಕ್ತಿಗತ ದೂಷಣೆಗಳೇ ಹೆಚ್ಚಿವೆ. ಅದರ ಬದಲಾಗಿ ತಾವೇನು ನೀಡಬಲ್ಲೆವು ಎಂಬ ಆಲೋಚನೆಗಳನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ 28 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಶೋಧ ನಡೆಸಲಾಗಿದೆ. ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು ಎಂದರು.

ಅಭ್ಯರ್ಥಿಗಳ ಪ್ರಚಾರಕ್ಕೆ ಆಧುನಿಕ ತಂತ್ರಜ್ಞಾನ ಸರಿಯಾಗಿ ಬಳಸಿದರೆ ಸಾಕು. ಪಾರ್ಟಿ ಫಂಡ್ ಅನಗತ್ಯ. ಕನಿಷ್ಟ ವೆಚ್ಚವನ್ನು ನಾನೇ ನಿಭಾಯಿಸುತ್ತೇನೆ. ಕಾರ್ಯಕರ್ತರೂ ಕೂಡ ಸಂಘಟನೆ ಅಥವಾ ಹಣ ಸಂಗ್ರಹಿಸುವಂತಿಲ್ಲ ಎಂದು ತಿಳಿಸಿದರು.

ಜನರು ಭ್ರಷ್ಟರಾಗಿಲ್ಲ. ಅವರನ್ನು ರಾಜಕಾರಣಿಗಳು ಟ್ಯೂನ್ ಮಾಡುತ್ತಿದ್ದಾರೆ. ಶೇ.10ರಷ್ಟಾದರೂ ಒಳ್ಳೆಯ ಜನರಿದ್ದಾರೆ. ಅಂಥವರಿಗಾದರೂ ಪ್ರತಿನಿಧಿಸುವುದು ಅನಿವಾರ್ಯ. ಹಣವೇ ಗೆಲ್ಲುವುದಾದರೆ ಪ್ರಜಾಪ್ರಭುತ್ವ ಬೇಕಾಗಿಲ್ಲ. ಪ್ರಜೆಗಳಿಂದಲೇ ಪ್ರಜೆ ಗೆಲ್ಲಬೇಕೆ ಹೊರತು ಮತ್ತೆ ಹಣ ಅಥವಾ ರಾಜ ಗೆಲ್ಲಬಾರದು.

ಆಯ್ಕೆಯಾದವರನ್ನು ವಾಪಸ್ (ರಿಕಾಲ್) ಕರೆತರುವ ಕೆಲಸ ಪಕ್ಷಗಳಿಂದಲೇ ಆಗಬೇಕು. ಸೆಲೆಬ್ರಿಟಿಗಳ ಮಾತು ಕೇಳಿ ಜನರು ಮತ ಹಾಕುತ್ತಾರೆಂಬ ಮನಸ್ಥಿತಿ ಹೋಗಬೇಕು. ಚುನಾವಣೆಯ 6 ತಿಂಗಳು, ವರ್ಷ ಮುನ್ನವೇ ಜನರಿಗೆ ಪ್ರಣಾಳಿಕೆ ಪ್ರಕಟಿಸಬೇಕು ಎಂದೂ ಆಶಿಸಿದರು.

ಬುದ್ಧಿವಂತರಿಗೆ ಮಾತ್ರ ಅಡಿಬರಹ: ವಿಚಾರವಂತರಿಗೇ ನಮ್ಮ ಪಕ್ಷದ ವಿಚಾರಗಳು ಬೇಗನೇ ಅರ್ಥವಾಗುತ್ತಿಲ್ಲ. ಮುಂದಿನ ತಲೆಮಾರಿನ ಜನರಿಗಾಗಿ ಇಂಥ ಕ್ರಾಂತಿ ಆಗಲೇಬೇಕಿದೆ ಎಂದ ಉಪೇಂದ್ರ, ‘ನಿಮ್ಮ ಪಕ್ಷದಲ್ಲಿ ‘ಬುದ್ಧಿವಂತರಿಗಾಗಿ ಮಾತ್ರ’ ಎಂಬ ಅಡಿಬರಹವಿರುತ್ತದಾ?’ ಎಂಬ ಪತ್ರಕರ್ತರ ಪ್ರಶ್ನೆಗೆ ಸಹಮತ ವ್ಯಕ್ತಪಡಿಸಿದರು.

ಬಹುಮತ ಬಂದ್ರೆ ಅದ್ಭುತ ಬದಲಾವಣೆ: ನಮ್ಮ ಪಕ್ಷಕ್ಕೆ ಬಹುಮತ ಬಂದರೆ ಕರ್ನಾಟಕದಲ್ಲಿ ಅದ್ಭುತ ಬದಲಾವಣೆ ತರಬಹುದು. ಕೆಲವೇ ಸೀಟು ಗೆದ್ದರೂ ಅಧಿಕಾರಕ್ಕಾಗಿ ಯಾರ ಜತೆನೂ ಹೋಗೋದಿಲ್ಲ. ಹಾಗೆ ಹೋದರೆ ಪ್ರಜಾಕೀಯ, ರಾಜಕೀಯದ ನಡುವೆ ವ್ಯತ್ಯಾಸ ಇರೋದಿಲ್ಲ. ಷರತ್ತುಬದ್ಧವಾಗಿ ಬಾಹ್ಯ ಬೆಂಬಲ ನೀಡುತ್ತೇವೆ ಎಂದು ಉಪೇಂದ್ರ ಸ್ಪಷ್ಟಪಡಿಸಿದರು.