ಶ್ರದ್ಧಾ ಅದೃಷ್ಟ ಪರೀಕ್ಷೆಗೆ ದಿನಾಂಕ ಫಿಕ್ಸ್

ಬೆಂಗಳೂರು: ನಟಿ ಶ್ರದ್ಧಾ ಶ್ರೀನಾಥ್ ಅಭಿನಯದ ಚೊಚ್ಚಲ ಬಾಲಿವುಡ್ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 15ಕ್ಕೆ ‘ಮಿಲನ್ ಟಾಕೀಸ್’ ಚಿತ್ರ ತೆರೆಕಾಣಲಿದೆ.

ತಿಗ್ಮಾನ್ಶು ಧುಲಿಯಾ ನಿರ್ದೇಶನದ ಈ ಚಿತ್ರದಲ್ಲಿ ಅಲಿ ಫೈಜಲ್ ನಾಯಕನಾಗಿ ನಟಿಸಿದ್ದು, ಅವರಿಗೆ ಕನ್ನಡತಿ ಶ್ರದ್ಧಾ ಶ್ರೀನಾಥ್ ಜೋಡಿಯಾಗಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಜ.18ಕ್ಕೆ ‘ಮಿಲನ್ ಟಾಕೀಸ್’ ಬಿಡುಗಡೆ ಆಗಬೇಕಿತ್ತು. ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ಎರಡು ತಿಂಗಳು ಮುಂದೂಡಲಾಗಿದೆ.

ತಿಗ್ಮಾನ್ಶು ಧುಲಿಯಾ ನಿರ್ದೇಶನದ ಈ ಚಿತ್ರ ಪಕ್ಕಾ ರೊಮ್ಯಾಂಟಿಕ್ ಲವ್​ಸ್ಟೋರಿ ಹೊಂದಿದೆಯಂತೆ. ‘ಈ ಸಿನಿಮಾ ಮಾಡುವುದಕ್ಕೆ ಹಲವು ವರ್ಷಗಳನ್ನೇ ಹೂಡಿಕೆ ಮಾಡಿದ್ದೇನೆ. ಏಕಪರದೆ ಚಿತ್ರಮಂದಿರಕ್ಕೆ ಸಂಬಂಧಿಸಿದ ಸಿನಿಮಾ ಇದಾಗಿದ್ದು, ಮಲ್ಟಿಪ್ಲ್ಲೆಕ್ಸ್​ಗಳ ಪ್ರಭಾವ ಕಡಿಮೆ ಇದ್ದಾಗಿನ ಸಮಯದಲ್ಲಿ ನಡೆಯುವ ಕಥೆ ಇದು. ತುಂಬ ಫ್ರೆಷ್ ಆಗಿದೆ. ಚಿತ್ರದ ಕಥೆ ಪ್ರತಿಯೊಬ್ಬರಿಗೂ ಆಪ್ತವೆನಿಸುತ್ತದೆ. ಆದಷ್ಟು ಬೇಗ ನಿಮ್ಮೆಲ್ಲರಿಗೆ ಸಿನಿಮಾ ತೋರಿಸಲು ಉತ್ಸುಕನಾಗಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ತಿಗ್ಮಾನ್ಶು. ಕನ್ನಡದ ಜತೆ ತೆಲುಗು, ತಮಿಳು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಶ್ರದ್ಧಾ ‘ಮಿಲನ್ ಟಾಕೀಸ್’ ಮೂಲಕ ಬಿ-ಟೌನ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವುದರಿಂದ ಅವರ ಪಾಲಿಗೆ ಈ ಚಿತ್ರ ತುಂಬ ಮುಖ್ಯ ಆಗಲಿದೆ. ಅವರಿಗೆ ಬಾಲಿವುಡ್ ಪ್ರೇಕ್ಷಕರು ಯಾವ ರೀತಿ ಸ್ವಾಗತ ಕೋರಲಿದ್ದಾರೆ ಎಂಬುದು ಮಾ.15ರಂದು ತಿಳಿಯಲಿದೆ.