ಗೋಳಗುಮ್ಮಟ ಸುತ್ತಿದ್ದ ಮಾಲ್ಗೂಡಿ ಡೇಸ್‌ನ ‘ವಾಚ್‌ಮನ್’

ಹೀರಾನಾಯ್ಕ ಟಿ. ವಿಜಯಪುರ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಕಾರ್ನಾಡ್ ಅವರು ವಿಜಯಪುರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಅಗಲಿಕೆ ಬರದ ನಾಡಿಗೂ ಬರ ಸಿಡಿಲು ಬಡಿದಂತಾಗಿದೆ. 1970-71ರ ದಶಕದಲ್ಲಿ ಬಿ.ವಿ. ಕಾರಂತರ ‘ಜೋಕುಮಾರ ಸ್ವಾಮಿ’ ನಾಟಕ ವಿಜಯಪುರದ ಮರಾಠಿ ವಿದ್ಯಾಲಯದ ಆವರಣದಲ್ಲಿ ಪ್ರದರ್ಶನಗೊಂಡಿತ್ತು. ಅದರಲ್ಲಿ ಕಾರ್ನಾಡ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿ, ಗುಮ್ಮಟ ನಗರಿಯೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರು.
ನಂತರ 1987ರಲ್ಲಿ ನಟ ಶಂಕರ್‌ನಾಗ್ ನಿರ್ದೇಶನದ ಮಾಲ್ಗೂಡಿ ಡೇಸ್‌ನಲ್ಲಿ ವಿಜಯಪುರದ ಜಿ.ಎನ್. ದೇಶಪಾಂಡೆ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರೆ, ಗಿರೀಶ್ ಕಾರ್ನಾಡ್ ಅವರು ‘ವಾಚ್‌ಮಾನ್’ ಪಾತ್ರದಲ್ಲಿ ಅಭಿನಯಿಸಿದ್ದರು. ಕಾರ್ನಾಡ್ ಅವರೊಂದಿನ ವಿಜಯಪುರದ ವಿಶ್ವೇಶ್ವರ ಸುರಪುರ, ಅಶೋಕ ಬಾದರದಿನ್ನಿ, ಶ್ರೀನಿವಾಸ ತಾವರಗೆರೆ, ಕಾಕಾ ಕಟ್ಟಿಮನಿ ಬಣ್ಣ ಹಚ್ಚಿದ್ದು ಮಾತ್ರ ಜಿಲ್ಲೆಯ ಹೆಮ್ಮೆ.
ಆ ನಂತರ ‘ವಾಚ್‌ಮನ್’ ಎಪಿಸೋಡ್ ಇಂಗ್ಲಿಷ್ ಅವತರಣಿಕೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ) ಹಾಗೂ ಎಬಿಸಿ (ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಷನ್) ನಲ್ಲಿ ಪ್ರಸಾರವಾಗಿದ್ದು, ಆ ಮೂಲಕ ವಿಶ್ವದ್ಯಂತ ಗಮನ ಸೆಳೆದಿತ್ತು. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಬೆಸ್ಟ್ ಫಾರಿನ್ ಲಾಂಗ್ವೇಜ್ ಮೇಡ್ ಇನ್ ಇಂಡಿಯಾ’ ಎನ್ನುವ ಗರಿಮೆ ಲಭಿಸಿತ್ತು ಎಂದು ಜಿ.ಎನ್.ದೇಶಪಾಂಡೆ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ಮಗಳೊಂದಿಗೆ ಗೋಳಗುಮ್ಮಟ ವೀಕ್ಷಣೆ : ಒಮ್ಮೆ ತಮ್ಮ ಮುದ್ದಿನ ಮಗಳೊಂದಿಗೆ ವಿಜಯಪುರಕ್ಕೆ ಆಗಮಿಸಿದ್ದ ಗಿರೀಶ್ ಕಾರ್ನಾಡ್ ಅವರು ಗೋಳಗುಮ್ಮಟವನ್ನು ಸುತ್ತಿದ್ದರು. ಮಳೆಯಲ್ಲಿ ತೊಯ್ದು, ಕೆಸರಾಗಿದ್ದ ತಮ್ಮ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಓಡಾಡಿದ್ದು ವಿಶೇಷ. ತಮ್ಮ ಆತ್ಮೀಯ ಗೆಳೆಯ ಜಿ.ಎನ್.ದೇಶಪಾಂಡೆ ಹಾಗೂ ಮಿತ್ರರೊಂದಿಗೆ ಗೋಳಗುಮ್ಮಟದಲ್ಲಿ ಗಂಟೆ ಗಟ್ಟಲೇ ಕಾಲ ಕಳೆದಿದ್ದರು. ಎಲ್ಲರೊಂದಿಗೆ ಆತ್ಮೀಯತೆ, ಸಹೋದರ ಭಾವದಿಂದ ಒಡನಾಡಿಯಾಗಿದ್ದರು. ಇಲ್ಲಿನ ಜವಾರಿ ಊಟ ಸವಿದು ಖುಷಿ ಪಟ್ಟಿದ್ದರು ಎಂದು ಜಿ.ಎನ್. ದೇಶಪಾಂಡೆ ಅವರು ಅಂದಿನ ಅನುಭವಗಳನ್ನು ವಿವರಿಸಿದರು.

2012ರಲ್ಲಿ ಆಗಮಿಸಿದ್ದ ಕಾರ್ನಾಡ್ :ವಿಜಯಪುರದ ವಚನ ಪಿತಾಮಹ ಡಾ. .ಗು. ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ 2012 ರ ಜನವರಿ 7 ರಂದು ಭೇಟಿ ನೀಡಿದ್ದ ಅವರು‘ಅಡಾಡತ ಆಯುಷ್ಯ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ‘ಕವಿಯಾಗಬಯಸಿ ನಾಟಕಕಾರನಾಗಿ ಹೊರಹೊಮ್ಮಿದೆ. ಆಕಸ್ಮಿಕವಾಗಿ ನಾಟಕ ಬರೆದೆ, ನಂತರ ನಾಟಕ ರಂಗದಲ್ಲಿಯೇ ಶ್ರೇಷ್ಠತೆಯನ್ನು ಅರಸುತ್ತಾ ಹೊರಟೆ ಎನ್ನುವ ಸಂದೇಶವನ್ನು ಗುಮ್ಮಟನಗರಿ ಜನರಿಗೆ ನೀಡಿದ್ದರು. ಹೀಗೆ ವಿಜಯಪುರ ಜಿಲ್ಲೆ ಗಿರೀಶ್ ಕರ್ನಾಡ್ ಅವರು ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು.

ಉತ್ತಮ ಗೆಳೆಯನಾಗಿ, ಸಾಹಿತ್ಯ ಲೋಕಕ್ಕೆ, ನಾಟಕ ಕ್ಷೇತ್ರಕ್ಕೆ ಗಿರೀಶ್ ಕಾರ್ನಾಡ್ ಅವರ ಕೊಡುಗೆ ಅಪಾರ. ಅವರ ಅಗಲಿಕೆಯಿಂದ ಮನಸ್ಸಿಗೆ ನೋವಾಗಿದೆ. ಮಾಲ್ಗೂಡಿ ಡೇಸ್, ಜೋಕುಮಾರಸ್ವಾಮಿ ನಾಟಕದಲ್ಲಿ ಅವರೊಂದಿಗೆ ಅಭಿನಯಿಸಿ ಅನೇಕ ಅನುಭವಗಳನ್ನು ಪಡೆದುಕೊಂಡಿದ್ದೇನೆೆ.
ಜಿ.ಎನ್. ದೇಶಪಾಂಡೆ, ಗಿರೀಶ್ ಕಾರ್ನಾಡ್‌ರ ಒಡನಾಡಿ


ಗಿರೀಶ ಕಾರ್ನಾಡರ ಕೊನೆಯ ನಾಟಕ ‘ರಾಕ್ಷಸ ತಂಗಡಿ’ ಕಳೆದ ವರ್ಷ ಆಗಸ್ಟ್ 2018ರಲ್ಲಿ ಮನೋಹರ ಗ್ರಂಥ ಮಾಲೆ ಧಾರವಾಡದಿಂದ ಪ್ರಕಟವಾಗಿದೆ. ನಾಟಕದ ವಸ್ತು ಕ್ರಿ.ಶ. 1565ರಲ್ಲಿ ನಡೆದ ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣವಾದ ಯುದ್ಧದ ಕುರಿತಾಗಿದೆ. ಅಂತಾರಾಷ್ಟ್ರೀಯ ರಾಷ್ಟ್ರೀಯ ಮಟ್ಟದಲ್ಲಿ ತುಂಬ ಚರ್ಚಿತವಾಗಿರುವ ನಾಟಕ. ಅದನ್ನು ಅಂತಾರಾಷ್ಟ್ರೀಯ ಲೇಖಕ ರಿಚರ್ಡ ಈಟನ್ ಮತ್ತು ಖ್ಯಾತ ಇತಿಹಾಸಕಾರ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಅರ್ಪಿಸಿದ್ದಾರೆ. ತಲೆದಂಡ, ಟಿಪ್ಪು ಕನಸು ಮತ್ತು ರಾಕ್ಷಸ ತಂಗಡಿ ಮೂರು ಮಹತ್ವದ ಸಾವಿರ ವರುಷಗಳ ಸಾಂಸ್ಕೃತಿಕ ತಲ್ಲಣಗಳನ್ನು ಗುರುತಿಸುವ ನಾಟಕಗಳಾಗಿವೆ.
ಕೃಷ್ಣ ಕೊಲ್ಹಾರ ಕುಲಕರ್ಣಿ, ಖ್ಯಾತ ಇತಿಹಾಸಕಾರ

Leave a Reply

Your email address will not be published. Required fields are marked *