ವಿಶ್ವ 10K ಕಲರವ: ಪುನೀತ್ ರಾಜ್​ಕುಮಾರ್ ಪ್ರಿಯಾಮಣಿ ಆಕರ್ಷಣೆ

ಸಿಟಿಕಾನ್ ಸಿಟಿ ಮಂದಿ ಭಾನುವಾರ ಬೆಳ್ಳಂಬೆಳಗ್ಗೆ ಫುಲ್ ಜೋಶ್​ನಲ್ಲಿದ್ದರು. 12ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಓಟದಲ್ಲಿ 24 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ವಾರಾಂತ್ಯದ ಮಜಾ ಹೆಚ್ಚಿಸಿದರು. ನಗರದ ಕೇಂದ್ರ ಭಾಗದಲ್ಲಿರುವ ಕಂಠೀರವ ಸ್ಟೇಡಿಯಂನಿಂದ ಆರಂಭಗೊಂಡ ಸ್ಪರ್ಧೆಯಲ್ಲಿ ಎಲ್ಲ ವಯೋಮಾನದವರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು.

ಬೆಳಗ್ಗೆ 5.30ಕ್ಕೆ ಆರಂಭಗೊಂಡ ಓಪನ್ 10ಕೆ ವಿಭಾಗದಲ್ಲಿ ಸುಮಾರು 16 ಸಾವಿರ ಮಂದಿ ಏಕಕಾಲದಲ್ಲಿ ಓಡುವ ಮೂಲಕ ಕೂಟವನ್ನು ಯಶಸ್ವಿಗೊಳಿಸಿದರು. ಹಾಲಿ ಕೂಟದ ರಾಯಭಾರಿ ಹಾಗೂ ನಾಲ್ಕು ಬಾರಿಯ ಗ್ರಾಂಡ್ ಸ್ಲಾಂ ಸಿಂಗಲ್ಸ್ ಚಾಂಪಿಯನ್ ಸ್ಪೇನ್​ನ ಮಾಜಿ ಟೆನಿಸ್ ಆಟಗಾರ್ತಿ ಅರಾಂಟ್​ಸ್ ಸ್ಯಾಂಚೇಜ್ ವಿಕಾರಿಯೋ ಮೊದಲ ರೇಸ್​ಗೆ ಚಾಲನೆ ನೀಡಿದರು. ಬಳಿಕ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಎಲೈಟ್ ಅಥ್ಲೀಟ್​ಗಳ ವಿಶ್ವ 10ಕೆ ಓಟ ನಡೆಯಿತು. ನಂತರ ಸೀನಿಯರ್ ಸಿಟಿಜನ್, ಅಂಗವಿಕಲರ ಹಾಗೂ ಮಜಾ ರನ್​ಗಳಿಗೆ ಚಾಲನೆ ನೀಡಲಾಯಿತು. ಈ ವೇಳೆ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್, ಕ್ರೀಡಾ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಬಾರಿಯೂ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಅಶ್ವತ್ಥನಾರಾಯಣ ಓಪನ್ 10ಕೆ ಓಟದಲ್ಲಿ ಕಾಣಿಸಿಕೊಂಡರು. ಒಟ್ಟಾರೆ ಯಾವುದೇ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗದೆ ಪ್ರಸಕ್ತ ವರ್ಷದ ಟಿಸಿಎಸ್ ವಿಶ್ವ 10ಕೆ ಓಟ ಸುಸೂತ್ರವಾಗಿ ನಡೆಯಿತು.

ಪುನೀತ್ ರಾಜ್​ಕುಮಾರ್ ಪ್ರಿಯಾಮಣಿ ಆಕರ್ಷಣೆ

ಕೂಟದ ರಾಯಭಾರಿ ಆಗಿರುವ ಸ್ಯಾಂಡಲ್​ವುಡ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಗೂ ನಟಿ ಪ್ರಿಯಾಮಣಿ ಮೈದಾನದಲ್ಲಿ ಹಾಜರಿದ್ದು, ಓಟಗಾರರನ್ನು ಹುರಿದುಂಬಿಸಿದರು. ಮೈದಾನದಲ್ಲಿ ನೆರೆದಿದ್ದ ಓಟಗಾರರತ್ತ ಕೈ ಬಿಸಿ ಓಡುವಂತೆ ಪ್ರೋತ್ಸಾಹಿಸಿದರು. ಜತೆಗೆ ಪುನೀತ್ ರಾಜ್​ಕುಮಾರ್ ಮೈದಾನದ ಟ್ರಾ್ಯಕ್​ನಲ್ಲಿ ಒಂದು ಸುತ್ತು ಹಾಕುವ ಮೂಲಕ ಓಟಗಾರರಲ್ಲಿ ಜೋಶ್ ತುಂಬಿದರು. ನಂತರ ಪುನೀತ್ ಜತೆ ಓಟಗಾರರು ಸೆಲ್ಪಿಗೆ ಮುಗಿಬಿದ್ದರು. ಮೈದಾನದಲ್ಲಿದ್ದ ಪ್ರೇಕ್ಷಕರು ಕೂಡ ‘ಅಪು್ಪ… ಅಪು್ಪ…’ ಎಂದು ಕೂಗುತ್ತಾ ಕೈ ಬೀಸುತ್ತಾ ಮುಂದೆ ಸಾಗಿದರು. ನಟಿ ಪ್ರಿಯಾಮಣಿ ಕೂಡ ಮೈದಾನದಲ್ಲಿ ಹಾಜರಿದ್ದ ಓಟಗಾರರನ್ನು ಹುರಿದುಂಬಿಸಿದರು.

ಗಮನಸೆಳೆದ ಅಭಿನಂದನ್, ಡ್ರಾ್ಯಗನ್!

ಕೂಟದ ಅಂತಿಮ ವಿಭಾಗ ಮಜಾ ರನ್ ಸಾಕಷ್ಟು ಮನರಂಜನೆಗೆ ಸಾಕ್ಷಿಯಾಯಿತು. ಬಾಲಾಕೋಟ್ ಏರ್​ಸ್ಟ್ರೈಕ್ ಬಳಿಕ ಅಯಾತಪ್ಪಿ ಪಾಕಿಸ್ತಾನ ವಶಕ್ಕೆ ಸಿಕ್ಕಿ ಎರಡು ದಿನಗಳ ಬಳಿಕ ಭಾರತಕ್ಕೆ ವಾಪಸಾಗಿದ್ದ ಅಭಿನಂದನ್ ವರ್ಧಮಾನ್​ಗೆ ಗೌರವ ಸೂಚಿಸಲು ಮಿಗ್ ಯುದ್ಧವಿಮಾನದ ಮಾದರಿಯೊಂದಿಗೆ ವ್ಯಕ್ತಿಯೊಬ್ಬರು ಗಮನ ಸೆಳೆದರೆ, ಯಕ್ಷಗಾನ ವೇಷಧಾರಿಯೊಬ್ಬರು ಓಟಗಾರರ ಉತ್ಸಾಹ ಹೆಚ್ಚಿಸಿದರು. ಕೆಲ ಮಂದಿ ಡ್ರಾ್ಯಗನ್ ಪ್ರತಿಕೃತಿ ಹೊತ್ತು ಸಾಗಿದರು. ಅಂಗವಿಕಲರು ಛಲ ಬಿಡದೆ ವೀಲ್ಹ್​ಚೇರ್​ನಲ್ಲಿಯೇ ಓಟದಲ್ಲಿ ಪಾಲ್ಗೊಂಡರು. ಓಟದಲ್ಲಿ ಪಾಲ್ಗೊಂಡ ಹಿರಿಯ ನಾಗರಿಕರ ಉತ್ಸಾಹವೂ ಯುವಕರನ್ನೇ ನಾಚಿಸುವಂತಿತ್ತು.

Leave a Reply

Your email address will not be published. Required fields are marked *