ಕೋಮಲ್​ ಮತ್ತು ಯುವಕನ ನಡುವೆ ನಡುರಸ್ತೆಯಲ್ಲೇ ಹೊಡೆದಾಟ: ಕೆಂಪೇಗೌಡ-2 ಚಿತ್ರ ವೀಕ್ಷಿಸಿ ಹಿಂದಿರುಗುವಾಗ ಘಟನೆ

ಬೆಂಗಳೂರು: ನಟ ಕೋಮಲ್ ಮತ್ತು ಯುವಕನೊಬ್ಬನ ನಡುವೆ ಟ್ರಾಫಿಕ್​ ವಿಚಾರವಾಗಿ ನಡುರಸ್ತೆಯಲ್ಲಿಯೇ ಹೊಡೆದಾಟ ನಡೆದಿರುವ ಘಟನೆ ನಗರದ ಮಂತ್ರಿ ಸ್ಕ್ವೇರ್​ ಮಾಲ್​ ಬಳಿ ಮಂಗಳವಾರ ಸಂಜೆ ನಡೆದಿದೆ.

ಆಗಸ್ಟ್​ 9 ರಂದು ಕೋಮಲ್​ ನಟನೆಯ ಕೆಂಪೇಗೌಡ-2 ಸಿನಿಮಾ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಪಿಗೆ ಥಿಯೇಟರ್​ಗೆ ಭೇಟಿ ನೀಡಿ ಚಿತ್ರವನ್ನು ವೀಕ್ಷಿಸಿ ವಾಪಸು ಮನೆಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸಂಪಿಗೆ ಚಿತ್ರಮಂದಿರದ ರೈಲ್ವೇ ಅಂಡರ್ ಪಾಸ್ ಬಳಿ‌ ದಾರಿ ಬಿಡುವ ವಿಚಾರಕ್ಕೆ ಯುವಕ ಮತ್ತು ಕೋಮಲ್​ ನಡುವೆ ಗಲಾಟೆ ನಡೆದಿದ್ದು, ದ್ವಿಚಕ್ರ ವಾಹನದಲ್ಲಿ ಬಂದ ಯುವಕ ಕೋಮಲ್​ ಅವರ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ವೇಳೆ ಕೋಮಲ್​ ಕೂಡ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಕೋಮಲ್​ ಅವರು ಕಾರು ಯುವಕನ ದ್ವಿಚಕ್ರ ವಾಹನಕ್ಕೆ ಟಚ್​ ಆಗಿದ್ದರಿಂದ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಪೊಲೀಸರ ಎದುರೇ ಹೊಡೆದಾಟ ನಡೆದಿದೆ.

ಗಲಾಟೆಯಲ್ಲಿ ಕೋಮಲ್ ಅವರ ಮುಖ ಹಾಗೂ ಮೂಗಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ಮಲ್ಲೇಶ್ವರಂ ಠಾಣೆಗೆ ಕೋಮಲ್​ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *