ಸಹೋದರ ಕೋಮಲ್​ ಮೇಲೆ ಹಲ್ಲೆ ಮಾಡಿದನ ವಿರುದ್ಧ ಜಗ್ಗೇಶ್​ ಗುಡುಗು: ದಾದಾಗಿರಿ ಕೊನೆಯಾಗಬೇಕೆಂದ ನಟ

ಬೆಂಗಳೂರು: ಸಹೋದರ ಕೋಮಲ್​ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್​, ಬೆಂಗಳೂರಿನಲ್ಲಿ ಈ ರೀತಿಯ ಘಟನೆಗಳನ್ನು ನಡೆಯಲು ಬಿಡಬಾರದು ಎಂದು ಹೇಳಿದರು.

ಘಟನೆಯ ಬಗ್ಗೆ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಮನೆಯಲ್ಲಿ ಇದ್ದಾಗ ನನ್ನ ತಮ್ಮನಿಂದ ಫೋನ್​ ಕರೆ ಬಂತು. ನನ್ನ ಮೇಲೆ ಹಲ್ಲೆ ಮಾಡಿದರು ಎಂದು ತಮ್ಮ ಹೇಳಿದ್ದನ್ನು ಕೇಳಿ ಬೇಸರವಾಯಿತು. ಬಂದಾಗ ವಿಷಯ ಗೊತ್ತಾಯಿತು. ಮದ್ಯಪಾನ ಮಾಡೋದು, ಹುಡುಗಿಯರನ್ನು ಕರೆದುಕೊಂಡು ಬಂದು ಪೋಸ್​ ನೀಡೋದು ಹಾಗೂ ಸಾರ್ವಜನಿಕರಿಗೆ ಕಿರುಕುಳ ನೀಡುವ ಒಂದು ಗುಂಪಿದೆ. ಅದರಲ್ಲಿ ನನ್ನ ತಮ್ಮನ ಮೇಲೆ ಹಲ್ಲೆ ಮಾಡಿದವನು ಒಬ್ಬನು, ನನ್ನ ತಮ್ಮ ಮಗಳನ್ನು ಟ್ಯೂಶನ್​ಗೆ ಬಿಟ್ಟು ಬರುತ್ತಿದ್ದಾಗ ದಾರಿ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಗಲಾಟೆ ನಡೆದಿದೆ. ನಾಲ್ವರು ಬೈಕ್ ಸವಾರರು ನನ್ನ ತಮ್ಮನಿಗೆ ಹೊಡೆದಿದ್ದಾರೆ. ಬೆಂಗಳೂರಿನಲ್ಲಿ ಈ ರೀತಿಯ ಘಟನೆ ಆಗಲು ಬಿಡಬಾರದು ಎಂದು ಹೇಳಿದರು.

ನನ್ನ ತಮ್ಮ ಅಮಾಯಕ. ಘಟನೆ ಗೊತ್ತಾಗುತ್ತಿದ್ದಂತೆ ನಾನೇ ಖುದ್ದಾಗಿ ಬಂದೆ. ಇತ್ತೀಚೆಗೆ ದಾದಾಗಿರಿಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಡ್ರಗ್ಸ್​ ಸೇವನೆ ಜಾಸ್ತಿಯಾಗಿದೆ. ಹುಡುಗಿಯರ ಶೋಕಿ ಹೆಚ್ಚಾಗಿದೆ. ಈತನು ಕೂಡ ಮದ್ಯ ಸೇವನೆ ಮಾಡಿದ್ದ. ಇವರಿಗೆ ಹೇಳುವರು, ಕೇಳುವರು ಇಲ್ಲ. ಹೀಗಾಗಿ ನಾನು ಪೊಲೀಸ್​ ಸ್ನೇಹಿತರಲ್ಲಿ ಮನವಿ ಮಾಡುವುದೇನೆಂದರೆ ಈ ದಾದಾಗಿರಿ ಕೊನೆಯಾಗಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಘಟನೆ ಹಿನ್ನೆಲೆ
ಇಂದು ಸಂಜೆ ಸಂಪಿಗೆ ಚಿತ್ರಮಂದಿರದ ರೈಲ್ವೇ ಅಂಡರ್ ಪಾಸ್ ಬಳಿ‌ ದಾರಿ ಬಿಡುವ ವಿಚಾರಕ್ಕೆ ಯುವಕ ಮತ್ತು ಕೋಮಲ್​ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಯುವಕ ಕೋಮಲ್​ ಅವರ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೋಮಲ್​ ಕೂಡ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಕೋಮಲ್​ ಅವರು ಕಾರು ಯುವಕನ ದ್ವಿಚಕ್ರ ವಾಹನಕ್ಕೆ ಟಚ್​ ಆಗಿದ್ದರಿಂದ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಕೋಮಲ್​ ಮುಖ ಹಾಗೂ ಮೂಗಿಗೆ ಗಾಯಗಳಾಗಿದ್ದ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *