ವರಮಹಾಲಕ್ಷ್ಮೀ ಹಬ್ಬಕ್ಕೆ ಸುದೀಪ್-ದರ್ಶನ್ ಮುಖಾಮುಖಿ

ಬೆಂಗಳೂರು: ದರ್ಶನ್ ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದ ಸಮಯ ಬಂದೇ ಬಿಟ್ಟಿದೆ. ‘ಕುರುಕ್ಷೇತ್ರ’ ಸಿನಿಮಾ ಯಾವಾಗ ರಿಲೀಸ್ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ ನಿರ್ಮಾಪಕ ಮುನಿರತ್ನ.

ಆ.9ರಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ‘ಕುರುಕ್ಷೇತ್ರ’ ತೆರೆಕಾಣಲಿದೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಅಚ್ಚರಿ ಎಂದರೆ, ಅದೇ ದಿನ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಆ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ದರ್ಶನ್ ವರ್ಸಸ್ ಸುದೀಪ್ ಪೈಪೋಟಿ ಏರ್ಪಡಲಿದೆ.

13 ವರ್ಷಗಳ ಹಿಂದೆ ಸುದೀಪ್ ನಟಿಸಿ, ನಿರ್ದೇಶಿಸಿದ್ದ ‘ಮೈ ಆಟೋಗ್ರಾಫ್’ ಮತ್ತು ದರ್ಶನ್ ಅಭಿನಯದ ‘ಸುಂಟರಗಾಳಿ’ ಚಿತ್ರಗಳು ಒಂದೇ ದಿನ ತೆರೆಕಂಡಿದ್ದವು. ಅದು ದೊಡ್ಡ ಮಟ್ಟದ ಬಾಕ್ಸ್ ಆಫೀಸ್ ಕದನಕ್ಕೆ ಸಾಕ್ಷಿ ಆಗಿತ್ತು. ಇದೀಗ ಅಂಥದ್ದೇ ಪೈಪೋಟಿ ಏರ್ಪಡುವ ಸಾಧ್ಯತೆ ಎದುರಾಗಿದೆ. ಕೆಲ ದಿನಗಳ ಹಿಂದಷ್ಟೇ ‘ಪೈಲ್ವಾನ್’ ನಿರ್ದೇಶಕ ಕೃಷ್ಣ, ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾವನ್ನು ತೆರೆಕಾಣಿಸುವುದಾಗಿ ಟ್ವೀಟ್ ಮಾಡಿದ್ದರು. ಈಗ ಮುನಿರತ್ನ ಕೂಡ ಅದೇ ದಿನವನ್ನು ನಿಗದಿ ಮಾಡಿದ್ದಾರೆ. ಇದರಿಂದ ಗಲ್ಲಾಪೆಟ್ಟಿಗೆ ಮೇಲೆ ಹೊಡೆತ ಬೀಳುವುದಿಲ್ಲವೇ? ‘ನಮ್ಮ ಪೈಪೋಟಿ ಏನಿದ್ದರೂ ಪರಭಾಷಾ ಸಿನಿಮಾಗಳ ಜತೆಗೆ ಮಾತ್ರ. ನಮ್ಮ ಕನ್ನಡ ಸಿನಿಮಾಗಳ ಜತೆಗೆ ಯುದ್ಧ ಮಾಡುವುದಿಲ್ಲ.

ಎರಡು ಚಿತ್ರಗಳು ಒಟ್ಟಿಗೆ ಬಂದರೆ ಏನೂ ಸಮಸ್ಯೆ ಆಗುವುದಿಲ್ಲ ಎಂಬುದು ನನ್ನ ಭಾವನೆ. ಪ್ರೇಕ್ಷಕರು ಎರಡನ್ನೂ ನೋಡಲಿ ಬಿಡಿ’ ಎಂಬದು ಮುನಿರತ್ನ ಸಮಜಾಯಿಷಿ. ಸದ್ಯ ‘ಕುರುಕ್ಷೇತ್ರ’ ಮತ್ತು ‘ಪೈಲ್ವಾನ್’ ಚಿತ್ರಗಳು ಬಿಡುಗಡೆಗೂ ಮೊದಲು ದೊಡ್ಡಮಟ್ಟದ ಸದ್ದು ಮಾಡುತ್ತಿದ್ದು, ಬಹುಭಾಷೆಯಲ್ಲಿ ಪ್ರೇಕ್ಷಕರಿಗೆ ದರ್ಶನ ನೀಡಲು ಸಜ್ಜಾಗಿವೆ.

ಜುಲೈನಲ್ಲಿ ಅದ್ದೂರಿ ಆಡಿಯೋ ಲಾಂಚ್

‘ಕುರುಕ್ಷೇತ್ರ’ದ ಆಡಿಯೋವನ್ನು ಅದ್ದೂರಿಯಾಗಿ ಜುಲೈನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಅಂದು ಚಿತ್ರದ ಎಲ್ಲ ಕಲಾವಿದರನ್ನು ಒಂದೆಡೇ ಸೇರಿಸುವ ಗುರಿ ಇಟ್ಟುಕೊಂಡಿದ್ದಾರೆ ಮುನಿರತ್ನ. ಲಹರಿ ಸಂಸ್ಥೆ 1.5 ಕೋಟಿ ರೂ.ಗೆ ಕನ್ನಡ ಅವತರಣಿಕೆಯ ಹಾಡುಗಳನ್ನು ಕೊಂಡುಕೊಂಡಿದೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು, ಹಿಂದಿ ಸ್ಯಾಟಲೈಟ್ ಹಕ್ಕುಗಳಿಂದ 9.5 ಕೋಟಿ ರೂ. ಹಾಗೂ ಕನ್ನಡ ಸ್ಯಾಟಲೈಟ್ ಹಕ್ಕುಗಳಿಂದ 9 ಕೋಟಿ ರೂ. ನಿರ್ವಪಕರಿಗೆ ಸಿಕ್ಕಿದೆ ಎನ್ನಲಾಗಿದೆ. ಕೇರಳ ಮೂಲದ ಸಂಸ್ಥೆಯೊಂದು ಈ ಚಿತ್ರವನ್ನು ಚೀನಿ ಭಾಷೆಗೆ ಡಬ್ ಮಾಡಲು ಮುಂದೆ ಬಂದಿದೆಯಂತೆ. ಒಂದು ವೇಳೆ, ಅದು ನೆರವೇರಿದ್ದೇ ಹೌದಾದರೆ ಚೀನಿ ಭಾಷೆಗೆ ಡಬ್ ಆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ಕುರುಕ್ಷೇತ್ರ ಪಾತ್ರವಾಗಲಿದೆ.