ಸುದೀಪ್‌ರ ಪೈಲ್ವಾನ್‌, ದರ್ಶನ್‌ರ ಕುರುಕ್ಷೇತ್ರ ಒಂದೇ ದಿನ ಬಿಡುಗಡೆ: ನಿಖಿಲ್‌ ಕುಮಾರಸ್ವಾಮಿ ಅಭಿಮನ್ಯುವಾಗಿರುವ ಸಿನಿಮಾ ಹೇಗಿರಲಿದೆ?

ಬೆಂಗಳೂರು: ಧುರ್ಯೋದನನಾಗಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟಿಸಿರುವ 50ನೇ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಆ. 9ರ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಲಿದ್ದು, ನಿಖಿಲ್ ಕುಮಾರಸ್ವಾಮಿ ಕೂಡ ಚಿತ್ರದಲ್ಲಿ ನಟಿಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತು ಚಿತ್ರದ ನಿರ್ಮಾಪಕ ಮುನಿರತ್ನ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ. 9ರಂದೇ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಅದೇ ದಿನ ದರ್ಶನ್ ನಟನೆಯ ಕುರುಕ್ಷೇತ್ರ ಕೂಡ ರಿಲೀಸ್ ಆಗುತ್ತಿದೆ. ಯಾವುದೇ ಸಿನಿಮಾ ಬಂದರೂ ಸಿನಿಮಾ ಬಿಡುಗಡೆ ದಿನಾಂಕ ಬದಲಾಗುವುದಿಲ್ಲ. ಎರಡು ದೊಡ್ಡ ಚಿತ್ರಗಳು ಒಂದೇ ದಿನ ರಿಲೀಸ್ ಆದರೆ ಅದನ್ನು ನಮ್ಮ ಚಿತ್ರರಂಗ ತಡೆದುಕೊಳ್ಳುತ್ತದೆ ಎಂದು ಹೇಳಿದರು.

ಅಂಬರೀಶ್ ಚಿತ್ರದಲ್ಲಿ ಭೀಷ್ಮನ ಪಾತ್ರ ಮಾಡಿದ್ದಾರೆ. ಅಂಬರೀಶ್ ನಿಧನರಾಗುವ ಮೊದಲೇ ಕುರುಕ್ಷೇತ್ರ ಚಿತ್ರಕ್ಕೆ ಅವರೇ ಡಬ್ಬಿಂಗ್ ಮಾಡಿಕೊಟ್ಟಿದ್ದರು. ಅವರೇ ನಿರ್ದೇಶಕರಿಗೆ ಕಾಲ್ ಮಾಡಿ ಬಂದು ಡಬ್ಬಿಂಗ್ ಮಾಡಿ ಹೋಗಿದ್ದರು. ನಾವು ಅದನ್ನ ಊಹಿಸಿರಲಿಲ್ಲ. ನಾವು ಲೇಟಾಗಿ ಡಬ್ಬಿಂಗ್ ಮಾಡಿಸೋಣ ಎಂದುಕೊಂಡಿದ್ದೆವು. ಆದರೆ ಅವರೇ ಕರೆ ಮಾಡಿ ಬಂದು ಡಬ್ ಮಾಡಿದರು ಎಂದು ನೆನಪಿಸಿಕೊಂಡರು.

ಕುರುಕ್ಷೇತ್ರ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ 9.5 ಕೋಟಿಗೆ ಮಾರಾಟವಾಗಿದೆ. ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತಿರುವುದರಿಂದಾಗಿ ಕಲಾವಿದರು ಬಂದಿಲ್ಲ. ಇದು ನಿರ್ಮಾಪಕರ ಕೆಲಸ ಆಗಿರುವುದರಿಂದ ನಾವು ಯಾವ ನಟರನ್ನೂ ಕರೆದಿಲ್ಲ. ಆಡಿಯೋ ಬಿಡುಗಡೆ ದಿನ ಎಲ್ಲ ಕಲಾವಿದರು ಇರುತ್ತಾರೆ. ಅವತ್ತು ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದು ಕಲಾವಿದರು ಯಾರೂ ಬಂದಿಲ್ಲ ಎಂಬ ಪ್ರಶ್ನೆಗೆ ಮಾಹಿತಿ ನೀಡಿದರು.

ಸಿನಿಮಾ ಲೇಟಾಗೋಕೆ ಕಾರಣ 3D ಕೆಲಸ. ಬೆಂಗಳೂರು ಹಾಗೂ ಚೆನ್ನೈನಲ್ಲಿ 3D ಕೆಲಸ ಮಾಡಿದ್ದೀವಿ. 2D ಬೇಗ ಆಗಿದ್ರಿಂದ ಡಿಸೆಂಬರ್‌ನಲ್ಲಿ ಸೆನ್ಸಾರ್ ಆಗಿತ್ತು. ಹೀಗಾಗಿ ತಡವಾಯ್ತು. 5 ಭಾಷೆಗಳಲ್ಲಿ ವಿಶ್ವಾದ್ಯಂತ ಕುರುಕ್ಷೇತ್ರ ರಿಲೀಸ್ ಆಗಲಿದೆ. ಜುಲೈ ಮೊದಲ ವಾರದಲ್ಲಿ ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ನಿರ್ದೇಶಕ ನಾಗಣ್ಣ ಅವರನ್ನು ಆಯ್ಕೆ ಮಾಡೋಕೆ ಕಾರಣ ಸಂಗೊಳ್ಳಿ ರಾಯಣ್ಣ ಸಿನಿಮಾ ಮಾಡಿದ್ದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)