ನಟ ದರ್ಶನ್ ಬಿರುಸಿನ ಮತ ಪ್ರಚಾರ

ಕೆ.ಆರ್.ನಗರ: ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವಾಭಿಮಾನದ ಮೇಲೆ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರನ್ನು ಬೆಂಬಲಿಸುವಂತೆ ನಟ ದರ್ಶನ್ ಮನವಿ ಮಾಡಿದರು.

ಮಂಡ್ಯಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪಟ್ಟಣದಲ್ಲಿ ಮತಪ್ರಚಾರ ಮಾಡಿದ ಅವರು ಮಾತನಾಡಿ, ಈ ಹಿಂದೆ ಮಂಡ್ಯ ಕ್ಷೇತ್ರದಲ್ಲಿ ದಿ.ಅಂಬರೀಷ್ ಸಹಕಾರದಿಂದ ಹಲವು ವ್ಯಕ್ತಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಈಗ ಅವರು ನಮ್ಮೊಂದಿಗೆ ಇಲ್ಲದ ಕಾರಣ ಅದನ್ನು ಮರೆತು ಸುಮಲತಾ ವಿರುದ್ಧವಾಗಿ ಟೀಕಾ ಪ್ರಹಾ ರದಲ್ಲಿ ತೊಡಗಿದ್ದಾರೆ. ಕೆಲವು ಮುಖಂಡರು ಅವರ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಜನತೆಯೇ ಉತ್ತರ ನೀಡಬೇಕಿದೆ ಎಂದರು.

ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಕ್ರಮ ಸಂಖ್ಯೆ 20, ರೈತ ಕಹಳೆ ಊದುತ್ತಿರುವ ಗುರುತಿಗೆ ಮತ ನೀಡುವ ಮೂಲಕ ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಪಟ್ಟಣದ ತೋಪಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳೊಂದಿಗೆ ಗರುಡುಗಂಭ ವೃತ್ತದವರೆಗೆ ಬೃಹತ್ ರೋಡ್ ಷೋ ನಡೆಸಿದರು. ನಂತರ ಮುಸ್ಲಿಂ ಬಡಾವಣೆಯಲ್ಲಿರುವ ಮಸೀದಿಗೆ ಭೇಟಿ ನೀಡಿದ್ದರು. ಇದೇ ವೇಳೆ ಉರ್ದು ಭಾಷೆಯಲ್ಲಿ ಮತಪ್ರಚಾರ ಮಾಡುವ ಮೂಲಕ ಮುಸ್ಲಿಂ ಸಮಾಜದ ಮತಗಳನ್ನು ಸೆಳೆಯಲು ಮುಂದಾದರು.

ನಂತರ ಪಟ್ಟಣದ ಮಧುವನಹಳ್ಳಿ, ವಿನಾಯಕ ಬಡಾವಣೆ, ಶ್ರೀರಾಮ ಬ್ಲಾಕ್, ಆಂಜನೇಯ ಬಡಾವಣೆ, ಬಸವೇಶ್ವರ ಬಡಾವಣೆ, ಬಜಾರ್ ರಸ್ತೆ ಸೇರಿದಂತೆ ಹಂಪಾಪುರ, ಮಂಚನಹಳ್ಳಿ, ಅರ್ಜುನಹಳ್ಳಿ, ಭೇರ್ಯದಲ್ಲಿ ಬಿರುಸಿನ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ದರ್ಶನ್‌ಗೆ ಹೂ ಮಾಲೆ ಹಾಕುವ ಮೂಲಕ ಸ್ವಾಗತಿಸಿದರು.

ಕಾಂಗ್ರೆಸ್ ಹೈಕಮಾಂಡ್ ಪದಾಧಿಕಾರಿಗಳು ಮತ್ತು ಮುಖಂಡರಿಗೆ ಎಷ್ಟೇ ಸೂಚನೆ ಮತ್ತು ನೋಟಿಸ್ ನೀಡಿದ್ದರೂ ಕ್ಯಾರೆ ಎನ್ನದೆ ಕಾಂಗ್ರೆಸ್ ಬಾವುಟ ಹಾರಿಸುತ್ತಿದ್ದರು. ಪ್ರಚಾರದಲ್ಲಿ ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ‌್ನಹಳ್ಳಿ ಶಿವಣ್ಣ, ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಯುವ ಕಾಂಗ್ರೆಸ್ ಅಧ್ಯಕ್ಷ ಭೋಜರಾಜ್, ಪುರಸಭಾ ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ಮಾಜಿ ಸದಸ್ಯರಾದ ಓಮ ಸುಬ್ರಹ್ಮಣ್ಯ, ಕೆ.ಎಲ್.ಕುಮಾರ್, ಕೋಳಿಪ್ರಕಾಶ್, ವಿನಯ್, ಮುಖಂಡರಾದ ದಿಡ್ಡಹಳ್ಳಿ ಬಸವರಾಜ್, ಮಧುವನಹಳ್ಳಿ ನಟರಾಜ್, ಸಾಮಾಯೋಗೀಶ್ ಹಾಜರಿದ್ದರು.