ಬೆಕ್ಕಿಗೂ ಸ್ವಾಭಿಮಾನ ಇದೆ, ಕೂಡಿ ಹಾಕಿದರೆ ಕತ್ತಿಗೆ ಬಾಯಿ ಹಾಕುತ್ತದೆ: ಎದುರಾಳಿಗಳಿಗೆ ದರ್ಶನ್​ ಟಾಂಗ್​

ಮಂಡ್ಯ: ಚುನಾವಣೆ ಹತ್ತಿರ ಬರುತ್ತಿದಂತೆಯೇ ಸಕ್ಕರೆ ನಾಡಿನ ಲೋಕಸಭಾ ಸಮರದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಸ್ಪರ್ಧಿಗಳ ನಡುವೆ ಮಾತಿನ ಭರಾಟೆ ಭರ್ಜರಿಯಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಪರ ಪ್ರಚಾರ ಕೈಗೊಂಡಿರುವ ನಟ ದರ್ಶನ್​ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಮತದಾರರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮಂಡ್ಯದ ಚಿಕ್ಕನಾಯಕನಹಳ್ಳಿಯಲ್ಲಿ ಅಬ್ಬರದ ಪ್ರಚಾರದ ನಡೆಸಿದ ದರ್ಶನ್, ಪ್ರತಿಯೊಬ್ಬರಿಗೂ ಸ್ವಾಭಿಮಾನ ಎಂಬುದು ಇರುತ್ತದೆ. ಮನೆಯಲ್ಲಿ ಸಾಕಿರುವ ಬೆಕ್ಕಿಗೂ ಸ್ವಾಭಿಮಾನ ಇದೆ. ಕೋಣೆಯಲ್ಲಿ ಕೂಡಿ ಹಾಕಿದರೆ ಅದು ಕತ್ತಿಗೆ ಬಾಯಿ ಹಾಕುತ್ತದೆ. ಅದೇ ರೀತಿ ಎಲ್ಲವನ್ನು ಸಹಿಸಿಕೊಳ್ಳೋಕೆ ಆಗೋಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.

ಪಶುಪತಿ ಗ್ರಾಮಕ್ಕೂ ಪ್ರವೇಶಿಸಿದ ದರ್ಶನ್​ ಅಲ್ಲಿನ ಮತದಾರರನ್ನು ಉದ್ದೇಶಿಸಿ ಮಾತನಾಡಿ, ಒಂದು ಜೋಡೆತ್ತು ಖರೀದಿಸಲು 1 ಲಕ್ಷ ರೂ. ಬೇಕು. ಹಾಲು ಕೊಡುವ ಹಸು ಕೊಳ್ಳಲು 80 ಸಾವಿರ ಆಗುತ್ತದೆ. ಒಂದು ಕುರಿ ಕೊಳ್ಳಲು 8 ಸಾವಿರ ರೂ. ಬೇಕಾಗುತ್ತದೆ. ಒಂದು ನಾಯಿ ತೆಗೆದುಕೊಳ್ಳಲು 5 ಸಾವಿರ ಬೇಕು. ಹೀಗಾಗಿ ಕೇವಲ 500 ರಿಂದ 2 ಸಾವಿರ ರೂಪಾಯಿಗೆ ಮಾರುಹೋಗಬೇಡಿ, ಸ್ವಾಭಿಮಾನಕ್ಕಾಗಿ ಹಣದ ವಿರುದ್ಧ ನಮ್ಮ ಹೋರಾಟ ಎಂದು ದರ್ಶನ್​ ತಿಳಿಸಿದರು. (ದಿಗ್ವಿಜಯ ನ್ಯೂಸ್​)