ಜುಗಾರಿ ಕ್ರಾಸ್​ನಲ್ಲಿ ಚಿರು ಪಯಣ?

ಬೆಂಗಳೂರು: ಕನ್ನಡದ ಹೆಸರಾಂತ ಕಾದಂಬರಿ ‘ಜುಗಾರಿ ಕ್ರಾಸ್’ ಮೇಲೆ ಚಂದನವನದ ಹಲವರು ಕಣ್ಣಿಟ್ಟಿದ್ದುಂಟು. ಪೂರ್ಣಚಂದ್ರ ತೇಜಸ್ವಿ ಬರೆದ ಈ ಕೃತಿಯನ್ನೇ ಆಧರಿಸಿ ಸಿನಿಮಾ ಮಾಡಲು ನಿರ್ದೇಶಕ ಕೂಡ್ಲು ರಾಮಕೃಷ್ಣ ಸೇರಿ ಅನೇಕರು ಪ್ಲ್ಯಾನ್‌ ರೂಪಿಸಿದ್ದರು. ಆದರೆ ಯಾರಿಂದಲೂ ಅದು ಕಾರ್ಯರೂಪಕ್ಕೆ ಬರಲಿಲ್ಲ. ಇತ್ತೀಚೆಗಷ್ಟೇ ನಿರ್ದೇಶಕ ಟಿ.ಎಸ್. ನಾಗಾಭರಣ ‘ಜುಗಾರಿ ಕ್ರಾಸ್’ ಕಡೆಗೆ ಆಸಕ್ತಿ ತೋರಿಸಿದ್ದಲ್ಲದೆ, ಸಿನಿಮಾ ಮಾಡಲು ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿರುವ ಬಗ್ಗೆ ಅಪ್​ಡೇಟ್ ಮಾಹಿತಿ ಸಿಕ್ಕಿತ್ತು.

ಕಾದಂಬರಿ ಹಕ್ಕುಗಳನ್ನು ಪಡೆದುಕೊಂಡು ಬಂದಿರುವ ‘ಕಡ್ಡಿಪುಡಿ’ ಚಂದ್ರು, ನಿರ್ವಣದ ಜವಾಬ್ದಾರಿ ಹೊತ್ತುಕೊಂಡಿರುವುದು ಕೂಡ ಸುದ್ದಿ ಆಗಿತ್ತು. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಮುಖ್ಯಭೂಮಿಕೆ ನಿಭಾಯಿಸುತ್ತಾರೆ ಎಂಬ ಗುಸುಗುಸು ಕೇಳಿಬಂದ ಹಿನ್ನೆಲೆಯಲ್ಲಿ ‘ಹ್ಯಾಟ್ರಿಕ್ ಹೀರೋ’ ಅಭಿಮಾನಿಗಳು ಖುಷಿ ಆಗಿದ್ದರು. ಈಗಾಗಲೇ ನಾಗಾಭರಣ ಮತ್ತು ಶಿವಣ್ಣನ ಕಾಂಬಿನೇಷನ್​ನಲ್ಲಿ ಬಂದ ‘ಜನುಮದ ಜೋಡಿ’ ಮತ್ತು ‘ಚಿಗುರಿದ ಕನಸು’ ಚಿತ್ರಗಳು ಜನಮೆಚ್ಚುಗೆ ಪಡೆದುಕೊಂಡಿದ್ದರಿಂದ ‘ಜುಗಾರಿ ಕ್ರಾಸ್’ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಈಗ ಚಿತ್ರತಂಡದಲ್ಲಿ ದೊಡ್ಡ ಬದಲಾವಣೆ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಕಾರಣಾಂತರಗಳಿಂದ ‘ಜುಗಾರಿ ಕ್ರಾಸ್’ನಲ್ಲಿ ಶಿವಣ್ಣ ನಟಿಸಲು ಸಾಧ್ಯವಾಗು ತ್ತಿಲ್ಲವಂತೆ. ಅವರ ಬದಲಿಗೆ ಚಿರಂಜೀವಿ ಸರ್ಜಾ ನಾಯಕನ ಸ್ಥಾನಕ್ಕೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಚಿರು ಜತೆ ಮಾತುಕತೆ ನಡೆದಿದ್ದು ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗುವುದು ಬಾಕಿ ಇದೆ. ಈವರೆಗೂ ಹೆಚ್ಚಾಗಿ ರಿಮೇಕ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ ಚಿರು ಖಾತೆಯಲ್ಲಿ ಸ್ವಮೇಕ್ ಸಿನಿಮಾಗಳ ಸಂಖ್ಯೆ ಕಡಿಮೆ ಇದೆ. ಅದರಲ್ಲೂ ‘ಜುಗಾರಿ ಕ್ರಾಸ್’ಗೆ ಅವರು ಆಯ್ಕೆ ಆಗಿದ್ದಾರೆ ಎಂಬುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಫೆಬ್ರವರಿಯಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರುವ ಸಾಧ್ಯತೆ ಇದೆ. ಪಾತ್ರವರ್ಗದಲ್ಲಿ ರಂಗಾಯಣ ರಘು, ಸಾಧುಕೋಕಿಲ, ತಾರಾ ಮುಂತಾದವರು ಬಣ್ಣ ಹಚ್ಚಲಿದ್ದಾರಂತೆ. ‘ಕಾನೂರಾಯಣ’ ಬಳಿಕ ನಾಗಾಭರಣ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. ‘ರಾಜಮಾರ್ತಾಂಡ’ ಮತ್ತು ‘ಸಿಂಗ’ ಸಿನಿಮಾಗಳಲ್ಲಿ ಚಿರು ತೊಡಗಿಕೊಂಡಿದ್ದಾರೆ.

Leave a Reply

Your email address will not be published. Required fields are marked *