ಧ್ರುವ-ಪ್ರೇರಣಾಗೆ ಗೋವುಗಳ ಆಶೀರ್ವಾದ!

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಒಂದಾದ ಮೇಲೊಂದರಂತೆ ಶುಭಕಾರ್ಯಗಳು ನಡೆಯುತ್ತಿವೆ. ಅದೇ ರೀತಿ ಇಂದು (ಡಿ. 9) ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಲಿದೆ. ಈಗಾಗಲೇ ಆ ಅದ್ಧೂರಿ ಕಾರ್ಯಕ್ರಮಕ್ಕೆ ಬನಶಂಕರಿ ಬಳಿಯ ಧರ್ಮಗಿರಿ ದೇವಾಲಯದಲ್ಲಿ ಹಳ್ಳಿ ಸೊಗಡಿನಲ್ಲಿ ಹಸಿರಿನ ವೇದಿಕೆ ಸಿದ್ಧಗೊಂಡಿದ್ದು, ಸ್ಯಾಂಡಲ್​ವುಡ್​ನ ಗಣ್ಯರು ಸಾಕ್ಷಿಯಾಗಲಿದ್ದಾರೆ. ಇದೆಲ್ಲದಕ್ಕಿಂತ ವಿಶೇಷ ಏನೆಂದರೆ, 50ಕ್ಕೂ ಹೆಚ್ಚು ಗೋವುಗಳು ಧ್ರುವ-ಪ್ರೇರಣಾ ನಿಶ್ಚಿತಾರ್ಥಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಲಿವೆ!

ಸರ್ಜಾ ಕುಟುಂಬದ ಪಾಲಿಗೆ ಆಂಜನೇಯ ಅಚ್ಚುಮೆಚ್ಚು. ಸಿನಿಮಾ ಮತ್ತು ವೈಯಕ್ತಿಕ ಬದುಕಿನಲ್ಲಿ ಆಂಜನೇಯನಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಇತ್ತೀಚೆಗೆ ಅರ್ಜುನ್ ಸರ್ಜಾ ಜನ್ಮದಿನಕ್ಕೆ ಮಗಳು ಐಶ್ವರ್ಯಾ, ಗಿರ್ ತಳಿಯ ಹಸುವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅದರಂತೆ ಇದೀಗ ಮನೆಯಲ್ಲಿನ ಶುಭ ಕಾರ್ಯಕ್ಕೆ ಹಸುಗಳ ದಂಡೇ ಆಗಮಿಸಲಿದೆ. 25 ಪುರೋಹಿತರು ನಿಶ್ಚಿತಾರ್ಥ ಕಾರ್ಯದಲ್ಲಿ ಭಾಗಿಯಾದರೆ, ತಿರುಪತಿಯಿಂದ ಬಂದಿರುವ 50 ಮಕ್ಕಳಿಂದ ವೇದ-ಘೋಷ ಪಾರಾಯಣ ನಡೆಯಲಿದೆ. ಕಲಾ ನಿರ್ದೇಶಕ ಅರುಣ್ ಸಾಗರ್ ನೇತೃತ್ವದಲ್ಲಿ ಸಾವಿರಾರು ತೆಂಗಿನ ಗರಿಗಳನ್ನು ಬಳಸಿಕೊಂಡು ಮಂಟಪ ನಿರ್ಮಾಣ ಮಾಡಲಾಗಿದೆ. ಆ ಮಂಟಪದಲ್ಲಿ ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತದಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಧ್ರುವ-ಪ್ರೇರಣಾ, ಮದುವೆಗೆ ಅಧಿಕೃತ ಮುದ್ರೆ ಒತ್ತಲಿದ್ದಾರೆ. ಈ ಮೂಲಕ ಬಾಲ್ಯದ ಪ್ರೀತಿ, ಮದುವೆಯಲ್ಲಿ ಒಂದಾಗುವ ಕಾಲ ಹತ್ತಿರ ಬಂದಿದೆ. ಫೆಬ್ರವರಿ-ಮಾರ್ಚ್ ವೇಳೆಗೆ ಈ ಜೋಡಿ ಹಸೆಮಣೆ ತುಳಿಯಲಿದೆ.

ನಿಶ್ಚಿತಾರ್ಥಕ್ಕೆ 24 ಲಕ್ಷ ರೂ. ಮೌಲ್ಯದ ವಜ್ರದುಂಗರ

ಬಾಲ್ಯ ಸ್ನೇಹಿತೆಯನ್ನು ವರಿಸುತ್ತಿರುವ ಧ್ರುವ ಸರ್ಜಾ, ನಿಶ್ಚಿತಾರ್ಥಕ್ಕಾಗಿ ವಜ್ರದ ಉಂಗುರವನ್ನು ಖರೀದಿಸಿದ್ದಾರೆ. ಬರೋಬ್ಬರಿ 24 ಲಕ್ಷ ರೂ. ಮೌಲ್ಯದ ಉಂಗುರವನ್ನು ವಜ್ರದ ಹರಳುಗಳಿಂದಲೇ ಮಾಡಲಾಗಿದೆ. 1.45 ಕ್ಯಾರೆಟ್​ನ ಒಂದು ದೊಡ್ಡ ಹರಳು ಸೇರಿ ಒಟ್ಟು 26 ವಜ್ರದ ಹರಳುಗಳು ಉಂಗುರದಲ್ಲಿವೆ.