ಪ್ರೇರಣಾ ಜತೆ ಧ್ರುವ ಎಂಗೇಜ್​ವೆುಂಟ್

ಬೆಂಗಳೂರು: ಇತ್ತೀಚೆಗಷ್ಟೇ 30ನೇ ಜನ್ಮದಿನ ಆಚರಿಸಿಕೊಂಡಿದ್ದ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ, ‘ಮುಂದಿನ ಒಂದು ವರ್ಷದೊಳಗೆ ನನ್ನ ಮದುವೆ ಆಗಲಿದೆ. ಅದು ಕೂಡ ಲವ್ ಮ್ಯಾರೇಜ್’ ಎನ್ನುವ ಮೂಲಕ ಅಚ್ಚರಿ ನೀಡಿದ್ದರು. ಇದೀಗ ಆ ಮಾತು ನಿಜವಾಗುವ ಸಮಯ ಹತ್ತಿರ ಬಂದಿದೆ. ಮನೆಯ ಸಮೀಪವೇ ಇರುವ ಪ್ರೇರಣಾ ಅವರನ್ನು ಧ್ರುವ ಪ್ರೀತಿಸಿದ್ದು, ಆ ಪ್ರೀತಿ ಈಗ ಮದುವೆ ಹಂತಕ್ಕೂ ಬಂದಿದೆ.

ಕಳೆದ 14 ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿತ್ತು. ಸದ್ಯ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು, ಡಿ.9ರಂದು ಬೆಂಗಳೂರಿನ ಬನಶಂಕರಿಯಲ್ಲಿ ವಿವಾಹ ನಿಶ್ಚಿತಾರ್ಥ ನೆರವೇರಲಿದೆ. ಕಲಾ ನಿರ್ದೇಶಕ ಅರುಣ್ ಸಾಗರ್ ನಿಶ್ಚಿತಾರ್ಥಕ್ಕೆಂದೇ ಸೆಟ್ ಸಿದ್ಧಗೊಳಿಸುತ್ತಿರುವುದು ವಿಶೇಷ. ಒಂದೇ ಏರಿಯಾದಲ್ಲಿ ಇರುವ ಅವರಿಬ್ಬರು 14 ವರ್ಷಗಳಿಂದ ಪರಿಚಿತರು. ಸ್ನೇಹ ಪ್ರೀತಿಯಾಗಿ, ಪ್ರೀತಿ ಈಗ ಮದುವೆ ತನಕ ಬಂದಿದೆ. ಆ ಮೂಲಕ ಜನ್ಮದಿನದಂದು ಧ್ರುವ ಹೇಳಿದ ಮಾತನ್ನು ನಿಜ ಮಾಡಿದ್ದಾರೆ. ಮೂಲಗಳ ಪ್ರಕಾರ, ಧ್ರುವಗೆ ದೊಡ್ಡ ದೊಡ್ಡ ಕುಟುಂಬಗಳಿಂದ ಮದುವೆ ಆಫರ್ ಬಂದಿದ್ದರೂ, ಅವನ್ನೆಲ್ಲ ನಿರಾಕರಿಸಿ ಪ್ರೀತಿಸಿದ ಹುಡುಗಿಯನ್ನೇ ಕೈಹಿಡಿಯಲು ಸಜ್ಜಾಗಿದ್ದಾರೆ. ಅದೇ ರೀತಿ ಪ್ರೇರಣಾ ಕೂಡ ತಮಗೆ ಬಂದ ಮದುವೆ ಆಫರ್​ಗಳನ್ನೆಲ್ಲ ರಿಜೆಕ್ಟ್ ಮಾಡಿ, ‘ಬಹದ್ದೂರ್’ ಜತೆ ಸಪ್ತಪದಿ ತುಳಿಯೋಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಅದ್ದೂರಿ’, ‘ಬಹದ್ದೂರ್’, ‘ಭರ್ಜರಿ’ ಸಿನಿಮಾಗಳ ಮೂಲಕ ಯಶಸ್ಸಿನ ಸವಿಯುಂಡಿರುವ ಧ್ರುವ ಸದ್ಯ ‘ಫೊಗರು’ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಬರ್ತ್​ಡೇ ದಿನ ರಿಲೀಸ್ ಆದ ಸಿನಿಮಾದ ಟೀಸರ್ ಸಖತ್ ಸದ್ದು ಮಾಡಿತ್ತು. ಧ್ರುವ ಆಪ್ತರು ಹೇಳುವಂತೆ, ಡಿ.9ರಂದು ಎಂಗೇಜ್​ವೆುಂಟ್ ನಡೆದರೆ, ‘ಪೊಗರು’ ಸಿನಿಮಾ ಮುಗಿದ ಬಳಿಕ ಧ್ರುವ-ಪ್ರೇರಣಾ ಮದುವೆ ನಡೆಯಲಿದೆಯಂತೆ. ಇನ್ನು, ಇದೇ ವರ್ಷ ಧ್ರುವ ಸಹೋದರ, ನಟ ಚಿರಂಜೀವಿ ಸರ್ಜಾ ಕೂಡ ನಟಿ ಮೇಘನಾ ರಾಜ್ ಅವರನ್ನು ಮದುವೆಯಾಗಿದ್ದರು. ಬಹುಕಾಲದಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಕುಟುಂಬದವರನ್ನು ಒಪ್ಪಿಸಿ ಕಳೆದ ಮೇ ತಿಂಗಳಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.