ನಟ ಚೇತನ್​ ನನ್ನ ಮೈಮುಟ್ಟಿದ್ದರು, ಡಿನ್ನರ್​ಗೆ ಕರೆದಿದ್ದರು; ಇದಕ್ಕೆ ಮೀ ಟೂ ಅನ್ಬೇಕಾ: ಸರ್ಜಾ ಪುತ್ರಿ ಪ್ರಶ್ನೆ

ಬೆಂಗಳೂರು: ನಟ ಅರ್ಜುನ್​ ಸರ್ಜಾ ವಿರುದ್ಧ ಶ್ರುತಿ ಹರಿಹರನ್​ ದೂರು ನೀಡಿದ ಬೆನ್ನಲ್ಲೇ ಅವರ ಮಗಳು ಐಶ್ವರ್ಯಾ, ನಟ ಚೇತನ್​ ತಮ್ಮ ಜತೆ ಖಾಸಗಿಯಾಗಿ ನಡೆದುಕೊಂಡ ಬಗೆಯನ್ನು ವಿವರಿಸಿ ಶ್ರುತಿಯ ಆರೋಪವನ್ನು ಮತ್ತೆ ತಳ್ಳಿಹಾಕಿದ್ದಾರೆ.
ನಟ ಚೇತನ್​ ಕೂಡ ನನ್ನ ಮೈ ಮುಟ್ಟಿದ್ದಾರೆ. ಪ್ರೇಮ ಬರಹ ಫೋಟೋ ಶೂಟ್ ವೇಳೆ ನನ್ನ ಕೆನ್ನೆ ಸವರಿದರು. ಕುತ್ತಿಗೆ ಮುಟ್ಟಿದರು ಅದನ್ನೆಲ್ಲ ಲೈಂಗಿಕ ದೌರ್ಜನ್ಯ ಅನ್ನೋಕಾಗೋತ್ತಾ? ಡಿನ್ನರ್​ಗೆ ಕೂಡ ಕರೆದಿದ್ದರು. ಆ ಬಗ್ಗೆ ದೂರು ನೀಡಲು ಆಗುತ್ತದೆಯಾ? ಎಂದು ಪ್ರಶ್ನಿಸಿದ್ದಾರೆ.
ನಾವು ದೂರು ನೀಡಿರುವುದರಿಂದ ಪ್ರತಿ ದೂರು ನೀಡಿದ್ದಾರೆ. ಘಟನೆ ನಡೆದು 2 ವರ್ಷಗಳಾದರೂ ಏಕೆ ಸುಮ್ಮನಿದ್ದರು? ಶ್ರುತಿ ಹಿಂದೆ ಯಾರೋ ಇದ್ದಾರೆ. ಅವರು ಹೇಳಿಕೊಟ್ಟಂತೆ ಇವರು ಮಾತನಾಡುತ್ತಿದ್ದಾರೆ ಎಂದರು.

ಅರ್ಜುನ್​ ಸರ್ಜಾ ವಿರುದ್ಧ ಎಫ್​ಐಆರ್​
ಶ್ರುತಿ ಹರಿಹರನ್​ ನೀಡಿದ ದೂರಿನ ಅನ್ವಯ ಕಬ್ಬನ್​ ಪಾರ್ಕ್​ ಪೊಲೀಸರು ಅರ್ಜುನ್​ ಸರ್ಜಾ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳಗಳಾದ ಹೆಬ್ಬಾಳದ ರೆಸಿಡೆನ್ಸಿ ಕಾಲೇಜು ಬಳಿ ಪೊಲೀಸರು ಮಹಜರ್​ ನಡೆಸಿದ್ದು, ಅಲ್ಲಿಂದ ಯುಬಿ ಸಿಟಿಗೆ ಆಗಮಿಸಲಿದ್ದಾರೆ. ನಂತರ ಶ್ರುತಿ ಹೇಳಿಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ಎಲ್ಲವೂ ಸರಿಯಾಗಿತ್ತು
ವಿಸ್ಮಯ ಚಿತ್ರೀಕರಣದ ವೇಳೆ ಎಲ್ಲವೂ ಸಹಜವಾಗಿಯೇ ಇತ್ತು ಎಂದು ಚಿತ್ರ ನಿರ್ದೇಶಕ ಅರುಣ್​ ವೈದ್ಯನಾಥನ್​ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದಲ್ಲಿ ಶ್ರುತಿ ನಟಿಸಿದ್ದು ಕೇವಲ 8 ದಿನಗಳು ಮಾತ್ರ. ಅದರಲ್ಲಿರೋದು ಒಂದೇ ರೋಮ್ಯಾಂಟಿಕ್​ ಸೀನ್​. ರಿಹರ್ಸಲ್​ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಚಿತ್ರೀಕರಣದ ಹೊರತಾಗಿ ಏನು ನಡೆದಿದೆ ಗೊತ್ತಿಲ್ಲ ಎಂದಿದ್ದಾರೆ.