ವಿಜಯವಾಣಿ ಸುದ್ದಿಜಾಲ ಬೆಂಗಳೂರು
“ಪೊಲೀಸ್ ಕ್ವಾಟ್ರಸ್’, “ನಮ್ ಏರಿಯಾಲ್ ಒಂದಿನ’, “ಅಕೀರ’, “ವಾಸು ನಾನ್ ಪಕ್ಕಾ ಕಮರ್ಷಿಯಲ್’ ಸೇರಿ ಹಲವು ಚಿತ್ರಗಳಲ್ಲಿ ನಾಯಕನಾಗಿ ಮಿಂಚಿರುವ ಅನೀಶ್ ತೇಜೇಶ್ವರ್, 2021ರಲ್ಲಿ ತೆರೆಗೆ ಬಂದ “ರಾಮಾರ್ಜುನ’ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ್ದರು. ಇದೀಗ ನಾಲ್ಕು ವರ್ಷಗಳ ಗ್ಯಾಪ್ ನಂತರ ಮತ್ತೊಮ್ಮೆ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಅವರು ನಾಯಕನಾಗಿದ್ದ “ಆರಾಮ್ ಅರವಿಂದಸ್ವಾಮಿ’ ರಿಲೀಸ್ ಆಗಿತ್ತು. ಕಳೆದ ವಾರವಷ್ಟೇ ಅವರು ಮುಖ್ಯ ಭೂಮಿಕೆಯಲ್ಲಿದ್ದ “ಫಾರೆಸ್ಟ್’ ಬಿಡುಗಡೆಯಾಗಿತ್ತು. ಅದರ ಬೆನ್ನಲ್ಲೇ ಅನೀಶ್ ನಾಯಕ, ನಿರ್ದೇಶಕನಾಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
ಚಿತ್ರದ ಬಗ್ಗೆ, “ಜನ ನನ್ನಿಂದ ರೊಮ್ಯಾಂಟಿಕ್ ಕಾಮಿಡಿ ಕಥೆಗಳನ್ನು ನಿರೀಸುತ್ತಾರೆ. ಅದಕ್ಕೆ ತಕ್ಕಂತಹ ಕಥೆಯನ್ನೇ ಮಾಡಿಕೊಂಡಿದ್ದೇನೆ. ಈ ಚಿತ್ರದಲ್ಲಿ ತಮಿಳಿನ “ಲವ್ ಟುಡೇ’ ರೀತಿಯ ಇವತ್ತಿನ ಟ್ರೆಂಡ್ಗೆ ತಕ್ಕಂತ ಮಾಸ್ ಕಮರ್ಷಿಯಲ್ ಜತೆಗೆ ಉತ್ತಮ ಕಂಟೆಂಟ್ ಕೂಡ ಇರಲಿದೆ. “ರಾಮಾರ್ಜುನ’ ನಂತರ ಮತ್ತೆ ನಿರ್ದೇಶಿಸುತ್ತಿದ್ದೇನೆ. ಈ ಬಾರಿ ಇನ್ನೂ ದೊಡ್ಡ ಮಟ್ಟದಲ್ಲಿ, ಒಂದು ಉತ್ತಮ ಸಿನಿಮಾ ಮಾಡುವ ಉದ್ದೇಶ ನನ್ನದು’ ಎಂದು ಮಾಹಿತಿ ನೀಡುತ್ತಾರೆ ಅನೀಶ್. ಅಂದಹಾಗೆ ಚಿತ್ರದ ಶೀರ್ಷಿಕೆ, ಫಸ್ಟ್ ಲುಕ್, ತಾರಾಗಣ ಸೇರಿ ತಂತ್ರಜ್ಞರ ಬಗ್ಗೆ ಇದೇ ತಿಂಗಳಲ್ಲಿ ಘೋಷಣೆ ಮಾಡುವುದಾಗಿ ಅನೀಶ್ ಹೇಳಿಕೊಂಡಿದ್ದಾರೆ.
ಕನ್ನಡ, ತೆಲುಗಿನಲ್ಲಿ ರಿಲೀಸ್
ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಮೂಡಿಬರುತ್ತಿದೆ. ಈ ಬಗ್ಗೆ ಅನೀಶ್, “ಕನ್ನಡ ಮತ್ತು ತೆಲುಗಿನಲ್ಲಿ ಎರಡು ಬಾರಿ ಚಿತ್ರೀಕರಣ ನಡೆಸುತ್ತಿದ್ದೇವೆ. ನನಗೆ ತೆಲುಗು ಭಾಷೆಯ ಮೇಲೂ ಹಿಡಿತವಿದೆ. ಹೀಗಾಗಿ ಡಬ್ ಮಾಡಿ ಬಿಡುಗಡೆ ಮಾಡುವುದಕ್ಕಿಂತ ನೇರವಾಗಿ ಶೂಟಿಂಗ್ ಮಾಡಿ ರಿಲೀಸ್ ಮಾಡೋಣ ಅಂತ ಈ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ. ನಾನು ಈ ಚಿತ್ರದಲ್ಲಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಂದು ಟೀನೇಜ್ ಹುಡುಗನ ಪಾತ್ರ ಮತ್ತೊಂದು ಲುಕ್ ಕೂಡ ವಿಭಿನ್ನವಾಗಿರಲಿದೆ. ಈಗಾಗಲೇ ಶೇಕಡಾ 40ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಕೆಲವೇ ತಿಂಗಳಲ್ಲಿ ಶೂಟಿಂಗ್ ಪೂರ್ಣಗೊಳಿಸಿ, ರಿಲೀಸ್ ದಿನಾಂಕ ಘೋಷಿಸಲಿದ್ದೇವೆ. ಎಂದು ಮಾಹಿತಿ ನೀಡುತ್ತಾರೆ ನಾಯಕ/ ನಿರ್ದೇಶಕ ಅನೀಶ್ ತೇಜೇಶ್ವರ್.