ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡದ ಹೆಸರಾಂತ ನಟ, ನಿರ್ದೇಶಕ ಕಾಶೀನಾಥ್ ಪುತ್ರ ಅಭಿಮನ್ಯು ಕಾಶೀನಾಥ್ ಈಗಾಗಲೇ “ಬಾಜಿ’, “12 ಎಎಂ ಮಧ್ಯರಾತ್ರಿ’ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಆ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಅವರು ಸದ್ಯ “ಸೂರಿ ಲವ್ಸ್ ಸಂಧ್ಯಾ’ ಮತ್ತು “ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.
ಇತ್ತೀಚೆಗಷ್ಟೆ “ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ವಿಭಿನ್ನ ಲುಕ್, ಗೆಟಪ್ ಮತ್ತು ಮ್ಯಾನರಿಸಂನಲ್ಲಿ ಅಭಿಮನ್ಯು ಮಿಂಚಿದ್ದಾರೆ. ಕಳೆದ 12 ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಕಿರಣ್ ಎಸ್. ಸೂರ್ಯ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಚೊಚ್ಚಲ ಬಾರಿಗೆ ಆ್ಯಕ್ಷನ್- ಕಟ್ ಹೇಳಿರುವ ಚಿತ್ರವಿದು. ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್ನ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.
ನಟ ಕಿಚ್ಚ ಸುದೀಪ್ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ಅಭಿಮನ್ಯು ಕಾಶೀನಾಥ್ಗೆ ಸ್ಪೂರ್ತಿ ಉಡಿಮನೆ ನಾಯಕಿಯಾಗಿದ್ದು, ವಿಜಯಶ್ರೀ ಕಲಬುರ್ಗಿ, ಬಲರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದಿಪ್, ರವಿತೇಜ ತಾರಾಗಣದಲ್ಲಿದ್ದಾರೆ.