ಕುಡಿವ ನೀರಿಗೆ ಸಮಸ್ಯೆಯಾಗದಂತೆ ಕ್ರಮ

ಮಂಗಳೂರು: ಕಡು ಬೇಸಿಗೆಯ ಅವಧಿಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಎಲ್ಲ ನೀರಿನ ಯೋಜನೆಗಳಿಗೆ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸೂಚನೆ ನೀಡಿದರು.

ಬುಧವಾರ ಕರೆಯಲಾಗಿದ್ದ ಜಿಪಂ ತುರ್ತು ಸಭೆಯಲ್ಲಿ ಅವರು, ಮಳೆಗಾಲಕ್ಕೆ ಮುಂಚಿತವಾಗಿ ಗ್ರಾಮೀಣ ಪ್ರದೇಶದ ಎಲ್ಲ ಚರಂಡಿಗಳ ಹೂಳೆತ್ತಲು ಪಿಡಿಒಗಳಿಗೆ ನಿರ್ದೇಶನ ನೀಡುವಂತೆ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

 ಮೊತ್ತ ಬಾಕಿ: ನರಿಂಗಾನ ಗ್ರಾಪಂನಲ್ಲಿ ಕಳೆದ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಿದ ಟ್ಯಾಂಕರ್‌ಗಳಿಗೆ 8 ಲಕ್ಷ ರೂ. ಬಿಲ್ ಮೊತ್ತವನ್ನು ಇದುವರೆಗೂ ಪಾವತಿಸಿಲ್ಲ. ಜಿಪಂ ಸಿಇಒಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗೆ ಮಾಡಿದರೆ ತುರ್ತು ಪರಿಸ್ಥಿತಿಯಲ್ಲಿ ನೀರು ಪೂರೈಕೆ ಮಾಡಲು ಯಾರೂ ಮುಂದಾಗದೆ ತೊಂದರೆಯಾಗಲಿದೆ. ಬಿಲ್ ಪಾವತಿಸಲು ಇಷ್ಟು ವಿಳಂಬ ಏಕೆ ಎಂದು ಸದಸ್ಯೆ ಮಮತಾ ಗಟ್ಟಿ ಪ್ರಶ್ನಿಸಿದರು.

ಈ ವಿಚಾರದ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿ ಬಿಲ್‌ಗಳನ್ನು ಈಗಾಗಲೇ ಕ್ಲಿಯರ್ ಮಾಡಿಸಿದ್ದಾರೆ ಎಂದು ಸಿಇಒ ಸೆಲ್ವಮಣಿ ಪ್ರತಿಕ್ರಿಯಿಸಿದರು. ನೀರಿನ ಟ್ಯಾಂಕರ್‌ಗಳ ಬಿಲ್ ಮೊತ್ತವನ್ನು ಜಿಲ್ಲಾಧಿಕಾರಿಗೆ ನೀಡುವ ಬದಲು ಜಿಪಂಗೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.

ಲೋಡ್ ಶೆಡ್ಡಿಂಗ್: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುತ್ತಿದೆ. ಮನಬಂದಂತೆ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ರೈತರು ಮತ್ತು ಸಣ್ಣ ಉದ್ದಿಮೆದಾರರಿಗೆ ತೊಂದರೆಯಾಗಿದೆ ಎಂದು ಆಶಾ ತಿಮ್ಮಪ್ಪ ಗೌಡ ದೂರಿದರು.

ಬಹುಮಾನದ ಮೊತ್ತ ಪ್ರತಿ ಜಿಪಂ ಕ್ಷೇತ್ರಕ್ಕೆ ಹಂಚಿಕೆ: ದೀನ್ ದಯಾಳ್ ಉಪಾಧ್ಯಾಯ ಸಶಕ್ತೀಕರಣ ಪುರಸ್ಕಾರದಡಿ ದ.ಕ ಜಿಲ್ಲಾ ಪಂಚಾಯಿತಿಗೆ ಲಭಿಸಿದ 50 ಲಕ್ಷ ರೂ. ಬಹುಮಾನದ ಮೊತ್ತವನ್ನು ಸದಸ್ಯರ ಆಗ್ರಹದ ಮೇರೆಗೆ ಪ್ರತಿ ಜಿಪಂ ಕ್ಷೇತ್ರಕ್ಕೆ ಹಂಚಲು ನಿರ್ಧರಿಸಲಾಯಿತು. ಪುರಸ್ಕಾರದ ಹಣದಲ್ಲಿ ಪುತ್ತೂರಿನ ಶಾಂತಿಗೋಡಿನಲ್ಲಿ ಒಂದು ಸಮುದಾಯ ಭವನ ನಿರ್ಮಾಣ, ಜಿಪಂ ಆವರಣದಲ್ಲಿ ಕ್ಯಾಂಟೀನ್ ಮತ್ತು ಗ್ರಂಥಾಲಯ ನಿರ್ಮಿಸಲು ಅಧ್ಯಕ್ಷೆ, ಸದಸ್ಯರ ಅನುಮತಿ ಕೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಪ್ರತಿ ಸದಸ್ಯರ ಕ್ಷೇತ್ರಗಳಿಗೆ ಮೊತ್ತ ಹಂಚಿಕೆ ಮಾಡುವಂತೆ ಪಟ್ಟುಹಿಡಿದರು. ಕೊನೆಗೆ ಅಧ್ಯಕ್ಷೆ ಇದಕ್ಕೆ ಒಪ್ಪಿಕೊಂಡರು. ಅದರಂತೆ ಪ್ರತಿ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಣ ಬಳಕೆ ಮಾಡಲು ನಿರ್ಧರಿಸಲಾಯಿತು.

ಅಭಿವೃದ್ಧಿ ನಿಧಿ ಬಿಡುಗಡೆ: ಜಿಪಂ ಅಭಿವೃದ್ಧಿ ಫಂಡ್ ಅಡಿಯಲ್ಲಿ ಈಗಾಗಲೇ 4 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ, ರಸ್ತೆ ಸುರಕ್ಷತಾ ಕಾಮಗಾರಿ ಕೈಗೊಳ್ಳಲು 30 ಲಕ್ಷ ರೂ.ಗಳನ್ನೂ ಬಿಡುಗಡೆಗೊಳಿಸಿದೆ. ಇದರಲ್ಲಿ ಬಂಟ್ವಾಳಕ್ಕೆ 10 ಲಕ್ಷ ರೂ., ಬೆಳ್ತಂಗಡಿಗೆ 7.65 ಲಕ್ಷ ರೂ., ಸುಳ್ಯಕ್ಕೆ 7.65 ಲಕ್ಷ ರೂ., ಪುತ್ತೂರಿಗೆ 2.45 ಲಕ್ಷ ರೂ., ಮಂಗಳೂರು ತಾಲೂಕಿಗೆ 2 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದು ಜಿಪಂ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದರು.

28,154 ಬೆಳೆಗಾರರಿಗೆ ಕೊಳೆರೋಗ ಪರಿಹಾರ: ಅಡಕೆ ಕೊಳೆ ರೋಗ ಪರಿಹಾರವಾಗಿ ದ.ಕ ಜಿಲ್ಲೆಯ 28,154 ಅಡಕೆ ಬೆಳೆಗಾರರಿಗೆ 29.14 ಕೋಟಿ ರೂ. ಮೊತ್ತವನ್ನು ವಿತರಿಸಲಾಗಿದೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್. ನಾಯಕ್ ಮಾಹಿತಿ ನೀಡಿದರು. ಒಟ್ಟು 56,474 ಅಡಕೆ ಬೆಳೆಗಾರರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯಿಂದ ಹಾನಿಗೀಡಾದ ಪ್ರದೇಶಗಳ ಜಂಟಿ ಸರ್ವೇ ನಡೆಸಿ 60 ಕೋಟಿ ರೂ. ಪರಿಹಾರ ಅವಶ್ಯಕತೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರದ ಪರಿಹಾರ ಸಾಫ್ಟ್‌ವೇರ್ ಮೂಲಕ ನೇರವಾಗಿ ಬೆಳೆಗಾರರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದರಿಂದ ಪ್ರತಿ ಬೆಳೆಗಾರರು ಎಷ್ಟು ಮೊತ್ತ ಪಡೆದಿದ್ದಾರೆ ಎಂಬ ಮಾಹಿತಿ ತೋಟಗಾರಿಕೆ ಇಲಾಖೆಗೆ ನಿಖರವಾಗಿ ಸಿಗದು ಎಂದರು.