More

    ಕಾಯಿಪಲ್ಯೆ ಮಾರುಕಟ್ಟೆ ಮೇಲ್ದರ್ಜೆಗೇರಿಸಲು ಕ್ರಮ

    ಮುದ್ದೇಬಿಹಾಳ: ಪಟ್ಟಣದ ಇಂದಿರಾ ವೃತ್ತದಲ್ಲಿರುವ ಕಾಯಿಪಲ್ಯೆ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಸಿ.ಎಸ್. ನಾಡಗೌಡ(ಅಪ್ಪಾಜಿ) ಹೇಳಿದರು.

    ಪಟ್ಟಣದ ದೊಡ್ಡಕೆರೆ ಎದುರಿಗಿರುವ ಕಾಯಿಪಲ್ಯೆ ಮಾರುಕಟ್ಟೆಗೆ ಸೋಮವಾರ ಸಂಜೆ ಪುರಸಭೆ ಅಧಿಕಾರಿಗಳು, ಸದಸ್ಯರೊಂದಿಗೆ ಭೇಟಿ ನೀಡಿದ ಬಳಿಕ ಮಾರುಕಟ್ಟೆಯಲ್ಲಿ ಆಗಬೇಕಿರುವ ಮೂಲ ಸೌಕರ್ಯಗಳ ಕುರಿತು ವ್ಯಾಪಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಕಾಯಿಪಲ್ಯೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಬರುವ ಹಳ್ಳಿಯ ರೈತರು, ಕಾಳುಕಡಿ, ತರಕಾರಿ ಮಾರುವ ವ್ಯಾಪಾರಿಗಳು ನೆರಳಿನಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುವಂತಾಗಬೇಕು. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದು ಅವರಿಗೆ ವ್ಯಾಪಾರ ಮಾಡಲು ಹಾಗೂ ಖರೀದಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ತರಕಾರಿ ಮಾರುಕಟ್ಟೆಯ ಮೇಲೆ ಶೆಲ್ಟರ್ ಅಳವಡಿಸುವ ಬಗ್ಗೆ ಚಿಂತನೆ ಮಾಡಿದ್ದು ಅಧಿಕಾರಿಗಳಿಗೆ ತಿಳಿಸಿ ಅದನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು ಎಂದರು.

    ಪಟ್ಟಣದ ದ್ಯಾಮವ್ವನ ಕಟ್ಟೆ ಬಳಿಯಿರುವ ಹಳೆ ಕಾಯಿಪಲ್ಯೆ ಮಾರುಕಟ್ಟೆ ತೆರವುಗೊಳಿಸುವ ಬಗ್ಗೆ ತಾತ್ಕಾಲಿಕ ತಡೆ ನೀಡುವಂತೆ ಅಧಿಕಾರಿಗಳಿಗೆ ವಿನಂತಿಸಿದ್ದು ಅಲ್ಲಿನ ವ್ಯಾಪಾರಿಗಳು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಮತ್ತೆ ಆದೇಶ ಮಾಡಿದರೆ ಅದರ ತೆರವು ಕಾರ್ಯ ಆರಂಭಗೊಳ್ಳಬಹುದು. ಅದಕ್ಕೆ ಟೆಂಡರ್ ಕೂಡಾ ಆಗಿದೆ ಎಂದರು.

    ಪುರಸಭೆ ಮುಖ್ಯಾಧಿಕಾರಿ ಕೆ.ಎಂ. ಕಿಲಾರಿ, ಜೆಇ ಭೀಮನಗೌಡ ಬಗಲಿ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಶಿವು ಶಿವಪೂರ, ಹುಲಗಪ್ಪ ನಾಯ್ಕಮಕ್ಕಳ, ಡಿ.ಡಿ. ಬಾಗವಾನ, ಪಕ್ಷದ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಫೂರ ಮಕಾನದಾರ, ಪುರಸಭೆ ಮಾಜಿ ಸದಸ್ಯ ಸಂತೋಷ ನಾಯ್ಕೋಡಿ, ರಾಜು ರಾಯಗೊಂಡ, ಯೂಸೂಫ್ ನಾಯ್ಕೋಡಿ ಇತರರಿದ್ದರು.

    ಮಂತ್ರಿ ಆಗಬೇಕು ಎಂದು ಹಠಕ್ಕೆ ಬಿದ್ದಿಲ್ಲ

    ಸಾಂದರ್ಭಿಕವಾಗಿ ಜಾತಿ, ಲೆಕ್ಕಾಚಾರ, ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಎಂ.ಬಿ. ಪಾಟೀಲರದ್ದು ಮಂತ್ರಿ ಸ್ಥಾನ ಖಚಿತವಾಗಿತ್ತು. ಇನ್ನೊಂದು ಲಿಂಗಾಯತ ಸ್ಥಾನ ಕೊಡುತ್ತಾರೆ ಎಂದಾಗ ರಾಯರೆಡ್ಡಿ, ದರ್ಶನಾಪುರ ಅವರ ಹೆಸರು ಕೇಳಿ ಬಂದಿತ್ತು. ನಾನೂ ಹೈಕಮಾಂಡ್ ಸಂಪರ್ಕದಲ್ಲಿದ್ದೆ. ಆದರೆ ನಾನು ಮಂತ್ರಿ ಆಗಬೇಕು ಎಂದು ಯಾರಿಗೂ ಒತ್ತಾಯ ಮಾಡಿ, ಹಠಕ್ಕೆ ಬಿದ್ದಿಲ್ಲ. ಯಾರಾದರೂ ನಮ್ಮವರೆ ಸಚಿವರಾಗಿದ್ದಾರೆ. ಮುಂದಿನ ದಿನದಲ್ಲಿ ಯಾವ ರೀತಿಯಲ್ಲಿ ಆಲೋಚಿಸುತ್ತಾರೆ ನೋಡೋಣ. ಈಗ ಜಿಲ್ಲೆಗೆ ಏನು ಒಳ್ಳೆಯದಾಗಬೇಕು ಎಂಬುದನ್ನು ನೋಡೋಣ ಎಂದು ಶಾಸಕ ಸಿ.ಎಸ್. ನಾಡಗೌಡ(ಅಪ್ಪಾಜಿ) ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts