ರಟ್ಟಿಹಳ್ಳಿ: ಪಟ್ಟಣದಲ್ಲಿ ನ್ಯಾಯಾಲಯ ಆರಂಭಿಸುವ ಕುರಿತು ಶಾಸಕ ಯು.ಬಿ. ಬಣಕಾರ ನೇತೃತ್ವದಲ್ಲಿ ಹಿರೇಕೆರೂರು, ರಟ್ಟಿಹಳ್ಳಿ ಹಾಗೂ ರಾಣೆಬೆನ್ನೂರು ತಾಲೂಕಿನ ವಕೀಲರ ಸಂಘದ ಸದಸ್ಯರು ಹಾವೇರಿ ಜಿಲ್ಲಾ ಆಡಳಿತಾತ್ಮಕ ಮತ್ತು ಹೈಕೋರ್ಟ್ ನ್ಯಾಯಾಧೀಶ ಹೇಮಂತ ಚಂದನಗೌಡರ ಹಾಗೂ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ಅವರ ಜತೆ ಹಾವೇರಿ ಪ್ರವಾಸಿಮಂದಿರಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.
ಶಾಸಕ ಯು.ಬಿ.ಬಣಕಾರ ಮಾತನಾಡಿ, ರಟ್ಟಿಹಳ್ಳಿ ತಾಲೂಕಿನಲ್ಲಿ ನ್ಯಾಯಾಲಯ ಆರಂಭಿಸುವ ಕುರಿತು ಹಲವು ವರ್ಷಗಳಿಂದ ಬೇಡಿಕೆ ಇದೆ. ಪಟ್ಟಣದಲ್ಲಿರುವ ತೋಟಗಾರಿಕೆ ಇಲಾಖೆಯ ಕಟ್ಟಡವನ್ನು ನವೀಕರಿಸಿ ನ್ಯಾಯಾಲಯ ಪ್ರಾರಂಭಿಸಲು ಅನುಮತಿ ಪಡೆಯಲಾಗಿದೆ. ಈಗಾಗಲೇ ಟೆಂಡರ್ ಕರೆದಿದ್ದು ಕಟ್ಟಡವನ್ನು ನ್ಯಾಯಾಲಯಕ್ಕೆ ಅವಶ್ಯಕತೆಗೆ ಅನುಗುಣವಾಗಿ ನವೀಕರಿಸಲಾಗುವುದು. ಶೀಘ್ರವೇ ನ್ಯಾಯಾಲಯ ಪ್ರಾರಂಭಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಾವೇರಿ ಜಿಲ್ಲಾ ಆಡಳಿತಾತ್ಮಿಕ ಮತ್ತು ಹೈಕೋರ್ಟ್ ನ್ಯಾಯಾಧೀಶ ಹೇಮಂತ ಚಂದನಗೌಡರ ಮಾಹಿತಿ ಪಡೆದು ಕಾಮಗಾರಿ ಮುಕ್ತಾಯವಾದ ಬಳಿಕ ನ್ಯಾಯಾಲಯ ಪ್ರಾರಂಭಿಸುವ ಬಗ್ಗೆ ಸಹಕಾರ ನೀಡಲಾಗುವುದು ಎಂದರು.
ವಕೀಲರಾದ ಪಿ.ಡಿ. ಬಸನಗೌಡ್ರ, ಬಿ.ಎಚ್.ಬುರಡೀಕಟ್ಟಿ, ವಸಂತ ದ್ಯಾವಕ್ಕಳವರ, ಪಿ.ಸಿ. ಬಣಕಾರ, ಎಸ್.ವಿ. ತೊಗರ್ಸಿ, ಬಿ.ಎಂ. ಹೊಳೆಯಪ್ಪನವರ, ಎಂ.ಬಿ. ಜೋಕನಾಳ, ಸುರೇಶ ಬೆಣ್ಣಿ, ಐ.ಬಿ. ಗುಬ್ಬೇರ, ಬಿ.ಸಿ. ಪಾಟೀಲ, ಎಸ್.ಎಸ್. ಪಾಟೀಲ, ಎಸ್.ಎಚ್.ಪಾಟೀಲ, ದೀಪಕ ತೊಗರ್ಸಿ, ಏಕಾಂತ ಮುದಿಗೌಡ್ರ, ನಾಯಕ ಮತ್ತು ಇತರರು ಉಪಸ್ಥಿತರಿದ್ದರು.