More

    ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ಕ್ರಮ, ಬಂಟ್ವಾಳ ಪುರಸಭೆ ಸಭೆಯಲ್ಲಿ ಚರ್ಚೆ

    ಬಂಟ್ವಾಳ: ಹಲವು ವರ್ಷಗಳಿಂದ ಚರ್ಚೆಯ ವಿಷಯವಾಗಿರುವ ಪುರಸಭಾ ವ್ಯಾಪ್ತಿಯ ವಾಹನ ಪಾರ್ಕಿಂಗ್ ವ್ಯವಸ್ಥೆ ಮತ್ತೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂತು.

    ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಸೋಮವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸಂಚಾರಿ ಪೊಲೀಸ್ ಠಾಣೆಯ ಎಸೈ ಮೂರ್ತಿ ಮಾತನಾಡಿ, ಪೊಲೀಸ್ ಇಲಾಖೆ ವತಿಯಿಂದ ಪಾರ್ಕಿಂಗ್‌ಗಾಗಿ ಬಂಟ್ವಾಳ ಕಸ್ಬಾ, ಪಾಣೆಮಂಗಳೂರು ಹಾಗೂ ಬಂಟ್ವಾಳ ಮೂಡ ಗ್ರಾಮದಲ್ಲಿ ಜಾಗ ಗುರುತಿಸಿರುವ ವಿವರಣೆ ನೀಡಿದರು. ಪುರಸಭಾ ವ್ಯಾಪ್ತಿಯ ಖಾಸಗಿ ಕಟ್ಟಡಗಳು, ಸರ್ಕಾರಿ ಕಟ್ಟಡಗಳಿಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ ಕಟ್ಟಡ ನಿರ್ಮಿಸಲಾಗಿದೆ. ಬೆಂಗಳೂರು, ಮಂಗಳೂರಿನಲ್ಲಿ ಮಳೆಗೆ ಕಟ್ಟಡದೊಳಗೆ ನೀರು ನುಗ್ಗುವುದನ್ನು ನೋಡುತ್ತೇವೆ, ಇನ್ನು ಮುಂದೆ ಬಂಟ್ವಾಳದಲ್ಲೂ ಅದೇ ಸ್ಥಿತಿ ಬರಬಹುದು ಎಂದು ಹರಿಪ್ರಸಾದ್ ಆತಂಕ ವ್ಯಕ್ತಪಡಿಸಿದರು. ಸುದೀರ್ಘ ಚರ್ಚೆ ಬಳಿಕ ಪೊಲೀಸ್ ಇಲಾಖೆ ವತಿಯಿಂದ ಒಂದು ವಾರದೊಳಗೆ ವಾಹನ ಪಾರ್ಕಿಂಗ್‌ಗೆ ಸೂಕ್ತ ಜಮೀನು ಗುರುತಿಸಿ ಬಳಿಕ ಪೊಲೀಸರು, ಪುರಸಭೆ ಅಧಿಕಾರಿಗಳು, ಗ್ರಾಮಕರಣಿಕರು ಇದ್ದುಕೊಂಡು ಜಂಟಿ ಸರ್ವೇ ಮಾಡಿ, ಪಾರ್ಕಿಂಗ್ ಹಾಗೂ ನೋ-ಪಾರ್ಕಿಂಗ್ ಸ್ಥಳಗಳನ್ನು ಗುರುತಿಸುವುದಾಗಿ ಅಧ್ಯಕ್ಷ ಮಹಮ್ಮದ್ ಶರೀಫ್ ತಿಳಿಸಿದರು.

    ಕಂಪನಿ ಹೆಸರಿನಲ್ಲೇ ವಾಹನಗಳು: ಬಂಟ್ವಾಳ ಪುರಸಭೆಗೆ ಖರೀದಿಸಿರುವ ವಾಹನಗಳು ಇನ್ನೂ ಕಂಪನಿಯ ಹೆಸರಿನಲ್ಲಿಯೇ ಇದೆ. ಆರ್‌ಸಿ ಆಗಿಲ್ಲ, ವಿಮೆ ಇಲ್ಲ, ವಾಹನ ತಪಾಸಣೆ ಆಗಿಲ್ಲ. ಅನಾಹುತ ಸಂಭವಿಸಿದರೆ ಏನು ಗತಿ? ಏಕೆ ಈ ನಿರ್ಲಕ್ಷ ಎಂದು ಸದಸ್ಯರು ಪ್ರಶ್ನಿಸಿದರು. ಕಂಪನಿಯವರು ಕರೆ ಸ್ವೀಕರಿಸುತ್ತಿಲ್ಲ, ಸ್ಪಂದನೆ ನೀಡುತ್ತಿಲ್ಲ ಎಂದು ಅಧ್ಯಕ್ಷರು ಅಸಹಾಯಕತೆ ವ್ಯಕ್ತಪಡಿಸಿದರು. ನಾವು ಕಸ ಎಸೆಯುವ ವಾಹನಗಳಿಗೆ ದಂಡ ಹಾಕಲು ಹೊರಟಿದ್ದೇವೆ, ನಮ್ಮ ವಾಹನಗಳಿಗೇ ಸರಿಯಾದ ದಾಖಲೆ ಇಲ್ಲ ಎಂದು ವಾಸು ಪೂಜಾರಿ ಲೇವಡಿ ಮಾಡಿದರು.
    ಭಂಡಾರಿಬೆಟ್ಟು ಪರಿಸರಲ್ಲಿ ಕುಡಿಯಲು ಕೆಸರು ಮಿಶ್ರಿತ ನೀರು ಸರಬರಾಜಾಗುತ್ತಿದೆ. ಮೈರನ್‌ಪಾದೆ ಎಸ್‌ಸಿ ಕಾಲನಿಗೆ ನೀರಿನ ಟ್ಯಾಂಕ್ ಕಾಣುತ್ತದೆ, ಆದರೆ ನೀರು ಬರುತ್ತಿಲ್ಲ ಎಂದು ಹರಿಪ್ರಸಾದ್ ಅಳಲು ತೋಡಿಕೊಂಡರು. ಸಮಸ್ಯೆ ಪರಿಹರಿಸಲು ಸಿಬ್ಬಂದಿ ಕೊರತೆಯಿದೆ ಎಂದು ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಪ್ರತಿಕ್ರಿಯಿಸಿದರು.

    ಮತ್ತೆ ಸಿಸಿ ಕ್ಯಾಮೆರಾ ಪ್ರತಿಧ್ವನಿ: ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ತೀವ್ರ ಚರ್ಚೆ ನಡೆಯಿತು. ಸಿಸಿ ಕ್ಯಾಮೆರಾ ವ್ಯವಸ್ಥೆ ಅಪೂರ್ಣವಾಗಿರುವ ಬಗ್ಗೆ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಸಿಸಿ ಕ್ಯಾಮೆರಾಗಳಿರುವ ಜಾಗಗಳೇ ಕಸ ಹಾಕುವ ಪಾಯಿಂಟ್‌ಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಕಚೇರಿ ವ್ಯವಸ್ಥಾಪಕಿ ಲೀಲಾವತಿ, ಕಿರಿಯ ಇಂಜಿನಿಯರ್ ಶೋಭಾಲಕ್ಷ್ಮೀ ಉಪಸ್ಥಿತರಿದ್ದರು.

    12 ರೈನ್‌ಕೋಟಿಗೆ 21,490 ರೂಪಾಯಿ!: ಸ್ವಚ್ಛತಾ ಕಾರ್ಯ ನಿರ್ವಹಿಸುವ ವಾಹನದ ಡ್ರೈವರ್‌ಗಳಿಗೆ ರೈನ್‌ಕೋಟ್ ಖರೀದಿಸಲು ಘಟನೋತ್ತರ ಮಂಜೂರಾತಿ ನೀಡುವ ವಿಚಾರ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ಕೇವಲ 12 ರೈನ್‌ಕೋಟ್‌ಗಳಿಗೆ 21, 490 ರೂ. ಪಾವತಿಸಬೇಕಾದರೆ ಅದು ಎಂಥ ರೈನ್‌ಕೋಟ್ ಇರಬೇಕು? ಎಂದು ಸದಸ್ಯರು ಪ್ರಶ್ನಿಸಿದರು. ಗುತ್ತಿಗೆ ಆಧಾರದಲ್ಲಿರುವ ವಾಹನದ ಡ್ರೈವರ್‌ಗಳಿಗೆ ಗುತ್ತಿಗೆದಾರರು ರೈನ್‌ಕೋಟ್ ನೀಡಬೇಕೇ ವಿನಾಃ ಪುರಸಭೆ ಯಾಕೆ ನೀಡಬೇಕು ಎಂಬ ಪ್ರಶ್ನೆ ಬಂತು.

    ನಾವ್ಯಾಕೆ ಸಾಯಬೇಕು ನೀನೇ ಸಾಯಿ!: ಪುರಸಭೆ ಸಾಮಾನ್ಯ ಸಭೆ ಆರಂಭಗೊಂಡ ಕೆಲವೇ ಹೊತ್ತಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ನಿಂದನಾತ್ಮಕ ಪದ ಬಳಕೆಯೊಂದಿಗೆ ಗದ್ದಲದ ಗೂಡಾಯಿತು. ಒಳಚರಂಡಿ ಯೋಜನೆ ಅನುಷ್ಠಾನ ಬಗ್ಗೆ ಕರೆಯಲಾಗಿದ್ದ ವಿಶೇಷ ಸಭೆಗೆ ಗೈರುಹಾಜರಾಗಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ಸದಸ್ಯ ಗೋವಿಂದ ಪ್ರಭು, ನನಗೆ ಸಭೆ ಇರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ, ಸೌಜನ್ಯಕ್ಕಾದರೂ ಬಾಯಿಮಾತಿನಲ್ಲಿ ಹೇಳಬಹುದಿತ್ತು ಎಂದರು. ಪ್ರತಿಕ್ರಿಯಿಸಿದ ಸಿಬ್ಬಂದಿ ರಜಾಕ್ ಹೇಳಿರುವುದಾಗಿ ತಿಳಿಸಿದರು. ನನಗೆ ಹೇಳಲು ನೀವ್ಯಾರು? ಸಂಬಂಧಪಟ್ಟವರು ಸತ್ತಿದ್ದಾರಾ? ಎಂದು ಗೋವಿಂದ ಪ್ರಭು ಪ್ರಶ್ನಿಸಿದ್ದು, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಅವರನ್ನು ಕೆರಳಿಸಿದ್ದು, ತಕ್ಷಣ ಪ್ರತಿಕ್ರಿಯಿಸಿದ ಅವರು ನಾವ್ಯಾಕೆ ಸಾಯಬೇಕು? ನೀನು ಸಾಯಿ ಎಂದು ಏಕವಚನದಲ್ಲಿ ನಿಂದಿಸಿದರು. ಇದು ಪ್ರತಿಪಕ್ಷ ಸದಸ್ಯರನ್ನು ಕೆರಳಿಸಿ ಗೊಂದಲದ ವಾತಾವರಣ ಸೃಷ್ಟಿಸಿತು. ಬಿಜೆಪಿ ಸದಸ್ಯರೆಲ್ಲರೂ ಅಧ್ಯಕ್ಷರ ಪೀಠದ ಮುಂಭಾಗಕ್ಕೆ ಬಂದು ಪ್ರತಿಭಟಿಸಿದರು. ಕೆಲ ಹೊತ್ತು ಆರೋಪ -ಪ್ರತ್ಯಾರೋಪ ನಡೆದು ಸದಸ್ಯರನ್ನು ಅಧಿಕಾರಿಗಳು ಅವಮಾನಿಸುವ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಗೋವಿಂದ ಪ್ರಭು ನೇತೃತ್ವದಲ್ಲಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗಕ್ಕೆ ಮುಂದಾದಾಗ ಅಧ್ಯಕ್ಷ ಮಹಮ್ಮದ್ ಶರೀಫ್ ಮಧ್ಯಪ್ರವೇಶಿಸಿ ಸದನದ ಹಿತದೃಷ್ಟಿಯಿಂದ ಅಧಿಕಾರಿಗಳು ಸುಮ್ಮನಿರುವಂತೆ ಸೂಚಿಸಿದರು. ಆಡಳಿತ ಪಕ್ಷದ ಸದಸ್ಯ ಜನಾರ್ದನ ಚೆಂಡ್ತಿಮಾರ್ ಗೋವಿಂದ ಪ್ರಭು ಅವರ ಮನವೊಲಿಸಿದರು. ಬಳಿಕ ಸಭೆ ಯಥಾಸ್ಥಿತಿಯಲ್ಲಿ ಮುಂದುವರಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts