ಡ್ರಗ್ಸ್ ಹಾವಳಿ ನಿಯಂತ್ರಿಸಿ

ಹುಬ್ಬಳ್ಳಿ: ಹು-ಧಾ ಅವಳಿ ನಗರದಲ್ಲಿ ತಲೆ ಎತ್ತಿರುವ ಡ್ರಗ್ಸ್ (ಮಾದಕ ವಸ್ತುಗಳು) ಹಾವಳಿ ನಿಯಂತ್ರಿಸಲು ಕಾಲಮಿತಿ ಹಾಕಿಕೊಂಡು ಕ್ರಮ ಜರುಗಿಸಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಅವಳಿ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದರು.

ಸೋಮವಾರ ನಗರದಲ್ಲಿ 144 ಪೊಲೀಸ್ ಸಿಬ್ಬಂದಿ ಹಾಗೂ 6 ಅಧಿಕಾರಿಗಳ ವಸತಿ ಗೃಹ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗಾಂಜಾ, ಇತ್ಯಾದಿ ಮಾದಕ ವಸ್ತುಗಳನ್ನು ಪೂರೈಸುವವರನ್ನು ಬಂಧಿಸಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಠಾಣಾಧಿಕಾರಿಗಳು ಕಾಲೇಜ್, ಹಾಸ್ಟೆಲ್​ಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಕಾನೂನು ಕ್ರಮದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಈ ಕ್ರಮವನ್ನು ಈಗಾಗಲೇ ಬೆಂಗಳೂರಿನಲ್ಲಿ ಕೈಗೊಳ್ಳಲಾಗಿದೆ ಎಂದರು.

ಸುಮಾರು 75 ಸಾವಿರ ಪೊಲೀಸ್ ಸಿಬ್ಬಂದಿಯಲ್ಲಿ ಶೇ. 40-45ರಷ್ಟು ಜನರಿಗೆ ಮಾತ್ರ ವಸತಿಗೃಹ ಸೌಲಭ್ಯವಿದೆ. ಮುಂದಿನ ನಾಲ್ಕೈದು ವರ್ಷಗಳ ಅವಧಿಯಲ್ಲಿ ಶೇ. 70ರಷ್ಟು ಪೊಲೀಸ್ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದ್ದೇವೆ. ಈ ಕಾರಣಕ್ಕೆ ಪೊಲೀಸ್ ವಸತಿ ಗೃಹ ಯೋಜನೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

25 ಸಾವಿರ ಹುದ್ದೆ ಖಾಲಿ: ಪೊಲೀಸ್ ಇಲಾಖೆಯಲ್ಲಿ 25 ಸಾವಿರ ಹುದ್ದೆಗಳು ಖಾಲಿ ಇವೆ. ಹಿಂದೊಮ್ಮೆ ನಾಲ್ಕೈದು ವರ್ಷ ನೇಮಕಾತಿ ಪ್ರಕ್ರಿಯೆ ನಡೆಯದ್ದರಿಂದ ಈ ಕೊರತೆ ಉಳಿದುಕೊಂಡಿದೆ. ಪ್ರತಿ ವರ್ಷ ನಾಲ್ಕೈದು ಸಾವಿರ ಸಿಬ್ಬಂದಿ ನಿವೃತ್ತಿ ಹೊಂದುತ್ತಿದ್ದಾರೆ. ಈ ಸಂಖ್ಯೆಗಿಂತ ನೇಮಕಾತಿ ಪ್ರಮಾಣ ಹೆಚ್ಚಬೇಕು ಎಂದು ಅಭಿಪ್ರಾಯಿಸಿದರು.

ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತಿದ್ದ ಪಡಿತರ ರದ್ದುಪಡಿಸಿ ಮಾಸಿಕ 400 ರೂ. ನೀಡಲಾಗುತ್ತಿದೆ. ಹಣ ಬೇಡ ಎಂದಾದರೆ ಪುನಃ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು. ಪಡಿತರ ಅಕ್ಕಿ ಗುಣಮಟ್ಟದ ಬಗ್ಗೆ ಪೊಲೀಸ್ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ಬದಲಾವಣೆ ಮಾಡಲಾಗಿತ್ತು ಎಂದರು.

ಆಟೋಗೆ ಮೀಟರ್ ಯಾಕಿಲ್ಲ?: ಹು-ಧಾ ಅವಳಿ ನಗರದಲ್ಲಿ ಆಟೋರಿಕ್ಷಾಗಳಿಗೆ ಮೀಟರ್ ಯಾಕಿಲ್ಲ ಎಂದು ಗೊತ್ತಾಗುತ್ತಿಲ್ಲ. ಏನಾದರೂ ವಿನಾಯಿತಿ ನೀಡಲಾಗಿದೆಯೇ? ಆಟೋಗೆ ಮೀಟರ್ ಕಡ್ಡಾಯ ಮಾಡುವ ಬಗ್ಗೆ ಜಿಲ್ಲಾಧಿಕಾರಿ, ಆರ್​ಟಿಒ ಕಚೇರಿ ಅಧಿಕಾರಿಗಳು ರ್ಚಚಿಸಿ ಒಂದು ನಿರ್ಣಯಕ್ಕೆ ಬರಬೇಕು ಎಂದು ಡಿಸಿಎಂ ಪರಮೇಶ್ವರ ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಅವಳಿ ನಗರದಲ್ಲಿ ಸೋಶಿಯಲ್ ಕ್ಸಬ್ ಹೆಸರಿನಲ್ಲಿ ಇಸ್ಪೀಟ್ ಅಡ್ಡೆಗಳು ನಡೆಯುತ್ತಿವೆ. ಗಾಂಜಾ ಮಾರಾಟ ವ್ಯಾಪಕವಾಗಿದೆ. ಇವುಗಳನ್ನು ನಿಯಂತ್ರಿಸಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಹುಬ್ಬಳ್ಳಿಗೆ ಪಶ್ಚಿಮ ಸಂಚಾರ ಠಾಣೆ, ಆನಂದನಗರಕ್ಕೆ ಪೊಲೀಸ್ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ) ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಪ್ರಲ್ಹಾದ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಎಂಎಲ್​ಸಿ ಪ್ರದೀಪ ಶೆಟ್ಟರ್, ಮೇಯರ್ ಸುಧೀರ ಸರಾಫ್, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಎಂಎಲ್​ಸಿ ವೀರಣ್ಣ ಮತ್ತಿಗಟ್ಟಿ, ಜಿಲ್ಲಾಧಿಕಾರಿ ದೀಪಾ ಜೋಳನ್, ಎಸ್​ಪಿ ಜಿ. ಸಂಗೀತಾ, ಇತರರು ಇದ್ದರು.