ಪಾಂಡವಪುರ: ಪಟ್ಟಣಕ್ಕೆ ಹೊಂದುಕೊಂಡಿರುವ ಐತಿಹಾಸಿಕ ಹಿರೋಡೆ ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.
ಹಿರೋಡೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಶನಿವಾರ ಕೆರೆ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಕೆರೆ 188.18 ಎಂಸಿಎಫ್‌ಟಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪಟ್ಟಣ, ಕಾಚೇನಹಳ್ಳಿ, ದೇವೇಗೌಡನಕೊಪ್ಪಲು, ಚಿಕ್ಕಾಡೆ ಭಾಗದ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತಿದೆ. ಹೀಗಾಗಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕಿದೆ. ಇದಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಪಟ್ಟಣದ ಯುಜಿಡಿ ಸಮಸ್ಯೆಯನ್ನು ಬಗೆಹರಿಸಿ ಕೊಳಚೆ ನೀರು ಕೆರೆ ಸೇರದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕೆರೆಯಲ್ಲಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸುವುದರ ಜತೆಗೆ ಅರಣ್ಯ ಇಲಾಖೆ ವಶದಲ್ಲಿರುವ 150 ಎಕರೆ ಜಮೀನನ್ನು ಬಿಡಿಸಿ ಆ ಜಾಗವನ್ನು ಕೆರೆಗೆ ಮಂಜೂರು ಮಾಡಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಕಾಡಾ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ರೈತರ ಬೆಳೆಗಳನ್ನು ಸಾಗಿಸಲು ಸುತ್ತಲಿನ ರಸ್ತೆಗಳ ಅಭಿವೃದ್ಧಿ ಹಾಗೂ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗಾಗಿ ಕಾಡಾದಿಂದ ಅನುದಾನ ನೀಡಲಾಗುವುದು.ನೀರು ಬಳಕೆದಾರರ ಸಂಘಗಳು ತೆರಿಗೆ ವಸೂಲಾತಿಯ ಜತೆಗೆ ಸಂಘಗಳು ಚಟುವಟಿಕೆಯಿಂದ ಕೂಡಿದ್ದರೆ ಅಂತಹ ಸಂಘಗಳಿಗೆ ಕಾಡಾದಿಂದ ಅನುದಾನ ನೀಡಲಾಗುತ್ತದೆ. ಆ ಅನುದಾನದಿಂದ ನೀರು ಬಳಕೆದಾರರ ಸಂಘಗಳು ಕೆರೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದಿಂದ ಕಾಡಾಗೆ ಬರುವ ಅನುದಾನ ಕಡಿಮೆಯಾಗಿದ್ದು, ಬಂದ ಅನುದಾನವನ್ನು ರೈತರ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು ಎಂದರು.
ಇದೇ ವೇಳೆ ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಚ್ಚುಕಟ್ಟು ಪ್ರದೇಶದ ರೈತರು ಶಾಸಕರಿಗೆ ಮನವಿ ಸಲ್ಲಿಸಿದರು. ನೀರು ಬಳಕೆದಾರರ ಸಂಘದ ಅಧ್ಯಕ್ಷ ಬೆಟ್ಟೇಗೌಡ, ನಿರ್ದೇಶಕರಾದ ಆರ್.ಚನ್ನಕೇಶವ, ಜಯರಾಮೇಗೌಡ, ಜನಾರ್ದನ್, ಪುರಸಭೆ ಅಧ್ಯಕ್ಷೆ ಜ್ಯೋತಿ ಲಕ್ಷ್ಮ್ಮೀ ಬಾಬು, ಉಪಾಧ್ಯಕ್ಷ ಎಲ್.ಅಶೋಕ್, ಸದಸ್ಯರಾದ ಪಾರ್ಥಸಾರತಿ, ಜಯಲಕ್ಷ್ಮಮ್ಮ, ಉಮಾಶಂಕರ್, ನೀರಾವರಿ ನಿಗಮದ ಎಇಇ ಜಯರಾಮ್, ಎಇ ಹೊನ್ನೋಜಿರಾವ್, ಗಣೇಶ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಲಿಂಗರಾಜು, ದೀಪು ಇತರರು ಇದ್ದರು.