ಮರಳು ಅಕ್ರಮ ಸಾಗಾಟ ತಡೆಗೆ ಚೆಕ್‌ಪೋಸ್ಟ್

ಅನ್ಸಾರ್ ಇನೋಳಿ ಉಳ್ಳಾಲ
ಮರಳು ಅಕ್ರಮ ಸಾಗಾಟ ತಡೆಗೆ ಸರ್ಕಾರ ಮಟ್ಟದಲ್ಲಿ ನಿಯಮಗಳನ್ನು ತಂದರೂ, ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯಾದರೂ ಅಕ್ರಮ ತಡೆಗೆ ಸಜ್ಜಾಗಿರುವ ಎಸಿ ನೇತೃತ್ವದ ತಂಡ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸಿದ್ಧಗೊಳಿಸಿದ್ದು, ಕಾವಲಿಗೆ ಸಿಬ್ಬಂದಿಯನ್ನೂ ನೇಮಕ ಮಾಡಿದೆ.

ಹಿಂದೆ ಯಥೇಚ್ಛವಾಗಿ ಜನಸಾಮಾನ್ಯರಿಗೆ ಸಿಗುತ್ತಿದ್ದ ಮರಳು, ಕೇರಳಕ್ಕೆ ಸಾಗಿಸಲು ಆರಂಭಗೊಂಡ ಅಂದಿನಿಂದ ಜಿಲ್ಲೆಯಲ್ಲಿ ಮರಳಿಗೆ ಅಭಾವ ಕಾಡತೊಡಗಿದೆ. ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲಿ ಎರಡು ಯೂನಿಟ್ ಮರಳು ಆರರಿಂದ ಏಳು ಸಾವಿರ ರೂಪಾಯಿಯಿದ್ದರೆ, ಕೇರಳದಲ್ಲಿ ಬರೋಬ್ಬರಿ 25 ಸಾವಿರ ರೂ.ಇದೆ ಎನ್ನಲಾಗಿದೆ. ಈ ಕಾರಣಕ್ಕೆ ಮರಳು ವ್ಯಾಪಾರಿಗಳು ಕೇರಳಕ್ಕೆ ಮರಳು ಸಾಗಾಟ ಆರಂಭಿಸಿದ್ದರು. ಇದರಿಂದಾಗಿ ಜಿಲ್ಲೆಯ ಜನಸಾಮಾನ್ಯರು ಮರಳು ಸಿಗದೆ ಪರಿತಪಿಸುವಂತಾಗಿತ್ತು.

ಇದನ್ನು ಮನಗಂಡ ಜಿಲ್ಲಾಡಳಿತ ಮರಳು ಅಕ್ರಮ ಸಾಗಾಟ ತಡೆಗೆ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಅದಕ್ಕೆ ಬಲ ತುಂಬಬೇಕಾದ ಸರ್ಕಾರಿ ಮಟ್ಟದ ಇಲಾಖೆಯ ಕೆಲವು ಅಧಿಕಾರಿಗಳು, ಸಿಬ್ಬಂದಿ ಹಾಗೂ ರಾಜಕಾರಣಿಗಳು ಮರಳು ವ್ಯಾಪಾರಿಗಳ ಜತೆ ಕೈಜೋಡಿಸಿದ್ದರಿಂದ ಜಿಲ್ಲಾಡಳಿತ ಮತ್ತು ಪ್ರಾಮಾಣಿಕ ಅಧಿಕಾರಿಗಳ ಪ್ರಯತ್ನ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಾಣಲು ಇಂದಿಗೂ ಸಾಧ್ಯವಾಗಿಲ್ಲ.
ಅಕ್ರಮ ತಡೆಯಲು ಮುಂದಾದ ಕೆಲವು ಅಧಿಕಾರಿಗಳು, ಸರ್ಕಾರಿ ಮಟ್ಟದ ಸಿಬ್ಬಂದಿ ಜತೆ ಮಾಧ್ಯಮ ಪ್ರತಿನಿಧಿಗಳ ಮೇಲೆಯೂ ಹಲ್ಲೆ ನಡೆಸಲಾಗಿತ್ತು. ಜಿಪಿಎಸ್ ವ್ಯವಸ್ಥೆ ಜಾರಿಗೆ ತಂದರೂ ಕೇರಳಕ್ಕೆ ಮರಳು ಸಾಗಾಟ ನಿಲ್ಲಲಿಲ್ಲ. ಜಿಪಿಎಸ್ ವ್ಯವಸ್ಥೆಯಲ್ಲೂ ಗೋಲ್ ಮಾಲ್ ನಡೆದಿದೆ ಎನ್ನುವ ಆರೋಪವೂ ಕೇಳಿಬಂದಿದೆ.

ಗಡಿಯಲ್ಲಿ ಚೆಕ್‌ಪೋಸ್ಟ್ ರೆಡಿ: ಹಿಂದಿನಿಂದಲೂ ಅಕ್ರಮ ಮರಳು ಸಾಗಾಟ ತಡೆಯುವ ನಿಟ್ಟಿನಲ್ಲಿ ಕಠಿಣ ಧೋರಣೆ ಹೊಂದಿದ್ದ ಸಹಾಯಕ ಆಯುಕ್ತರು ಈ ಬಾರಿಯೂ ಜಿಲ್ಲಾಡಳಿತದ ಸಹಕಾರದಿಂದ ತಮ್ಮದೇ ಆದ ತಂಡ ರಚಿಸಿದ್ದಾರೆ. ಕರ್ನಾಟಕ- ಕೇರಳ ಗಡಿಭಾಗದಲ್ಲಿರುವ ಮರಳು ಸಾಗಾಟದ ಗುಪ್ತವಾಗಿರುವ ಎಂಟು ದಾರಿಗಳನ್ನು ಗುರುತಿಸಿ ಚೆಕ್‌ಪೋಸ್ಟ್ ಸಿದ್ಧ ಮಾಡಿಟ್ಟು ಸಿಬ್ಬಂದಿ ನೇಮಿಸಿದ್ದಾರೆ. ಈ ಮೂಲಕ ಜಿಲ್ಲಾಡಳಿತ ಅಕ್ರಮದ ವಿರುದ್ಧ ಮತ್ತೊಮ್ಮೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರಾಜಕಾರಣಿಗಳು, ಜನಪ್ರತಿನಿಧಿಗಳು ಸಹಕಾರ ನೀಡಿದರೆ ಜಿಲ್ಲಾಡಳಿತದ ಪ್ರಯತ್ನಕ್ಕೆ ಫಲ ಸಿಗಲಿದೆ.

ಮೂರು ಟಿಪ್ಪರ್ ವಶಕ್ಕೆ: ಸಹಾಯಕ ಆಯುಕ್ತರ ನೇತೃತ್ವದ ತಂಡ ಅಕ್ರಮ ಮರಳು ಸಾಗಾಟದ ಮೂರು ಟಿಪ್ಪರ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಎರಡು ದಿನಗಳ ಹಿಂದೆ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆಯಲು ಎ.ಸಿ.ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಪರಾರಿಯಾಗಲು ಮುಂದಾದ ಲಾರಿಯನ್ನು ಬೆನ್ನಟ್ಟಿ ಹಿಡಿದು ಕೊಣಾಜೆ ಠಾಣೆಗೆ ಸಾಗಿಸುವ ಸಂದರ್ಭ ಎ.ಸಿ.ಯವರ ಕಾರು ಕಂಬಳಪದವಿನಲ್ಲಿ ಪಂಕ್ಚರ್ ಆಗಿತ್ತು. ನಂತರ ಅವರು ಬಸ್ ಮೂಲಕ ಠಾಣೆಗೆ ಹೋಗಿ ಟಿಪ್ಪರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

 ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ತಡೆಯಲು ಗಡಿಯಲ್ಲಿ ಎಂಟು ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಕಟ್ಟೆಚ್ಚರ ವಹಿಸಲಾಗಿದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ರಾತ್ರಿ ಮತ್ತು ಹಗಲಿನಲ್ಲಿ ಕಾವಲು ಕಷ್ಟವಾಗಿದೆ.
ರವಿಚಂದ್ರ ನಾಯಕ್ ಸಹಾಯಕ ಆಯುಕ್ತ, ಮಂಗಳೂರು ಉಪ ವಿಭಾಗ

Leave a Reply

Your email address will not be published. Required fields are marked *