ಶಾಂತಿ ಭಂಗ ಮಾಡುವರ ವಿರುದ್ಧ ಕ್ರಮ

ಕೊಳ್ಳೇಗಾಲ: ತಾಲೂಕಿನ ಹೊಸಮಾಲಂಗಿ ಗ್ರಾಮದಲ್ಲಿ ಜ.18 ರಿಂದ ಶ್ರೀ ಬಸವೇಶ್ವರಸ್ವಾಮಿ ಹಾಲರವಿ ಉತ್ಸವ ಹಾಗೂ ಬಂಡಿ ಹಬ್ಬದಲ್ಲಿ ಶಾಂತಿ ಭಂಗ ಮಾಡುವರ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಶ್ರೀಕಾಂತ್ ಎಚ್ಚರಿಸಿದರು.


ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಬಂಡಿ ಹಬ್ಬದ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ವಿವಿದ ಕೋಮಿನ ಮುಖಂಡರಿಗೆ ಆಯೋಜಿಸಿದ್ದ ಶಾಂತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.


ವಿವಿಧ ಕೋಮಿನೊಂದಿಗೆ ಉಂಟಾಗಿದ್ದ ಬಿನ್ನಾಭಿಪ್ರಾಯದ ಹಿನ್ನೆಲೆ ಕಳೆದ 2 ವರ್ಷದಿಂದ ಗ್ರಾಮದಲ್ಲಿ ಕೈಬಿಟ್ಟಿದ್ದ ಶ್ರೀಬಸವೇಶ್ವರಸ್ವಾಮಿ ಹಾಲರವಿ ಉತ್ಸವ ಹಾಗೂ ಬಂಡಿ ಹಬ್ಬವನ್ನು ಈ ಬಾರಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದಕ್ಕೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.


ಪೂರ್ವಿಕರು ವಿವಿಧ ಹಬ್ಬಗಳನ್ನು ಆಚರಣೆಗೆ ತಂದಿರುವುದರ ಹಿಂದೆ ಎಲ್ಲ ಕೋಮಿನವರೊಂದಿಗೆ ಸೌಹಾರ್ಧತೆಯಿಂದ ಸಾಗುವ ಭಾವವಿದೆ. ನೆಂಟರಿಷ್ಟರ ಬೆಸುಗೆ ಕಾರ್ಯಕ್ರಮವಾಗಿ ಹಬ್ಬ ರೂಪುಗಳ್ಳಲು ಎಲ್ಲರು ಮುಕ್ತ ಅವಕಾಶ ಕಲ್ಪಿಸಬೇಕು. ಅದನ್ನೊರತುಪಡಿಸಿ, ಹಳೇ ವೈಷಮ್ಯ ಮತ್ತು ಗೊಂದಲ ಸೃಷ್ಟಿಗೆ ಯಾರೊಬ್ಬರೂ ಸಹಕರಿಸಬಾರದು. ಅಂವರಾದರೂ ಇದ್ದಲ್ಲಿ ಪೊಲೀಸರಿಗೆ ತಪ್ಪದೇ ಮಾಹಿತಿ ನೀಡುವಂತೆ ಕಿವಿ ಮಾತು ಹೇಳಿದರು.


ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ವಿ.ಸಿ.ವನರಾಜು ಮಾತನಾಡಿ, ಹಬ್ಬದ ವೇಳೆ ಕಿಡಿಗೇಡಿತನ ಮಾಡುವ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ವೃತ್ತಿ ನಿಮಿತ್ಯ ನಗರಪ್ರದೇಶದಲ್ಲಿದ್ದು, ಹಬ್ಬದ ವೇಳೆ ಗ್ರಾಮಕ್ಕೆ ಬಂದೋಗುವ ಯುವಕರ ಮೇಲೆ ಆಯಾ ಕೋಮಿನ ಮುಖಂಡರು ನಿಗಾವಿಡಬೇಕು. ಹಬ್ಬದ ಖುಷಿಯಲ್ಲಿ ಅತೀರೇಕವಾಗಿ ವರ್ತಿಸಿ ಕೋಮು ಸೌಹಾರ್ಧತೆ ಹಾಳು ಮಾಡದಂತೆ ಆಯಾ ಕುಟುಂಬದವರು ತಿಳಿವಳಿಕೆ ಹೇಳಿಕೊಳ್ಳಬೇಕು. ಹಬ್ಬದಲ್ಲಿ ಗದ್ದಲ, ಗೊಂದಲಕ್ಕೆ ಅವಕಾಶ ನೀಡಕೂಡದು. ಪಟಾಕಿ ಸಿಡಿಸುವುದು ಹಾಗೂ ಬಂಡಿ ಓಟ ಸ್ಪರ್ಧೆಗೆ ಅನುಮತಿ ಕಡ್ಡಾಯ ಎಂದು ತಿಳಿಸಿದರು.


ಅನುನ್ಯತೆಯಿಂದ ಆಚರಿಸಲು ನಿರ್ಧಾರ: ಇದೇ ವೇಳೆ ಗ್ರಾಮ ಮುಖಂಡರು ಮಾತನಾಡಿ, ಹಿಂದೆಂದು ನಮ್ಮ ಗ್ರಾಮದಲ್ಲಿ ಕೋಮು ಸೌಹಾರ್ಧತೆ ಹಾಳಾಗಿಲ್ಲ. ಕ್ಷುಲ್ಲಕ ಕಾರಣಕ್ಕೆ 2 ವರ್ಷ ಹಬ್ಬ ಸ್ಥಗಿತಗೊಳಿಸಲಾಗಿತ್ತು. ಇದೀಗ ಎಲ್ಲ ಕೋಮಿನ ನಾಡು, ದೇಶದ ಮುಖಂಡರು ಸೇರಿಕೊಂಡು ಜ.18 ರಂದು ಹಾಲರವಿ ಉತ್ಸವ, ಜ.19 ರಂದು ಬಂಡಿ ಹಬ್ಬ ಆಚರಿಸಲು ಅನುನ್ಯತೆಯಿಂದ ಹಬ್ಬ ಆಚರಿಸಲು ನಿರ್ಧರಿಸಿದ್ದೇವೆ ಎಂದರಲ್ಲದೇ, ಹಬ್ಬದ ವೇಳೆ ಯಾವುದೇ ಅನಾಹುತವಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಿದರು.


ಗ್ರಾಮದ ನಾಡಗೌಡ ರಾಚಪ್ಪ, ಮಣಿಗಾರ್ ಉಮೇಶ್, ವಿವಿಧ ಕೋಮಿನ ಯಜಮಾನರಾದ ಬಸವಣ್ಣ, ಮಾದೇಗೌಡ, ಕುಮಾರ್, ಮಾದೇವಶೆಟ್ಟಿ, ರಂಗಸ್ವಾಮಿ, ನಾಗೇಗೌಡ, ಶಿವಣ್ಣ, ರಾಜು, ಚೆಲುವಯ್ಯ, ಮಲ್ಲೇಶ್, ರೇವಣ್ಣ ಅವರು ಹಾಜರಿದ್ದರು.


Leave a Reply

Your email address will not be published. Required fields are marked *