ಮದ್ದೂರು: ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ತಾಲೂಕಿನ ಪ್ರೌಢಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಹೇಳಿದರು.

ತಾಲೂಕು ವ್ಯಾಪ್ತಿಯಲ್ಲಿ 6 ಸರ್ಕಾರಿ ಪ್ರೌಢಶಾಲೆಗಳು ಹಾಗೂ 7 ಅನುದಾನಿತ ಪ್ರೌಢಶಾಲೆಗಳು ಈ ಬಾರಿಯ ಫಲಿತಾಂಶದಲ್ಲಿ ಶೇ.40ಕ್ಕಿಂತಲೂ ಕಡಿಮೆ ಫಲಿತಾಂಶ ಬಂದಿರುವ ಕಾರಣ ಸೂಕ್ತ ಕಾರಣ ನೀಡುವಂತೆ ಸಂಬಂಧಪಟ್ಟ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲಾಗುವುದು ಬಳಿಕ ಅವರು ನೀಡುವ ಉತ್ತರದ ಆಧಾರದ ಮೇಲೆ ತೀರ್ಮಾನಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಬಾರಿಗಿಂತ ಈ ಬಾರಿ ತಾಲೂಕಿಗೆ ಉತ್ತಮ ಫಲಿತಾಂಶ ದೊರಕಿದ್ದು, 5ನೇ ಸ್ಥಾನ ದಕ್ಕಿದೆ. ಸರ್ಕಾರಿ ಪ್ರೌಢಶಾಲೆಗಳು ಒಟ್ಟು ಶೇ.62.49ರಷ್ಟು ಫಲಿತಾಂಶ ಪಡೆದಿವೆ. ಅನುದಾನಿತ ಪ್ರೌಢಶಾಲೆಗಳು ಶೇ.49.82 ಫಲಿತಾಂಶ ಪಡೆದಿದ್ದು, ಅನುದಾನ ರಹಿತ ಪ್ರೌಢಶಾಲೆಗಳು ಒಟ್ಟು ಶೇ.76.75 ಫಲಿತಾಂಶವನ್ನು ಪಡೆಯುವುದರ ಮೂಲಕ ಒಟ್ಟಾರೆ ಫಲಿತಾಂಶ ಶೇ.65.65 ಫಲಿತಾಂಶ ಪಡೆದಂತಾಗಿದೆ ಎಂದ ಅವರು ವಿದ್ಯಾರ್ಥಿನಿಯರೇ ಈ ಬಾರಿಯ ಫಲಿತಾಂಶದಲಿಯೂ ಮೇಲುಗೈ ಸಾಧಿಸಿದ್ದಾರೆ ಎಂದರು.
ಪಟ್ಣಣ ಶಿವಪುರದ ಪೂರ್ಣಪ್ರಜ್ಞಾ ಶಾಲೆ ವಿದ್ಯಾರ್ಥಿನಿ ಸಿ.ಪುನೀತಾ 625ಕ್ಕೆ 624 ಅಂಕಗಳಿಸುವುದರೊಂದಿಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನಿ ಅನನ್ಯಾ 625ಕ್ಕೆ 622 ಅಂಕಗಳಿಸುವುದರೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಾರಿ ಜಿಲ್ಲೆಯಲ್ಲಿ ತಾಲೂಕು 5ನೇ ಸ್ಥಾನ ಪಡೆಯಲು ಕಾರಣರಾದ ವಿದ್ಯಾರ್ಥಿಗಳು ಹಾಗೂ ಶಾಲೆಯ ಪ್ರೌಢಶಾಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸಿ.ಪುನೀತಾ ಅವರನ್ನು ಸನ್ಮಾನಿಸಿದರು.
ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಅನಂತೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಶಿವಸುಂದರ್ ಇತರರು ಇದ್ದರು.