ಆ್ಯಸಿಡ್ ದಾಳಿ ಪ್ರಕರಣಕ್ಕೆ ಟ್ವಿಸ್ಟ್, ಅರಿವಿಲ್ಲದೆ ಅಪ್ರಾಪ್ತ ಮಾಡಿದ ಕೃತ್ಯ

ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ನಂತರದ ಸಂಭ್ರಮಾಚರಣೆ ವೇಳೆ ನಡೆದ ಆ್ಯಸಿಡ್​ ದಾಳಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಪ್ರಾಪ್ತನೊಬ್ಬ ತನಗರಿವಿಲ್ಲದಂತೆ ಈ ಕೃತ್ಯ ಎಸಗಿರುವುದು ತಿಳಿದು ಬಂದಿದೆ.

ಪ್ರಕರಣ ಕುರಿತು ಎಸ್​ಪಿ ಡಾ. ದಿವ್ಯ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದು, ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಅಪ್ರಾಪ್ತ ತನಗರಿವಿಲ್ಲದಂತೆ ಮೆರವಣಿಗೆ ಸಾಗುತ್ತಿದ್ದ ವೇಳೆ ಮನೆ ಕಿಟಕಿ ಬಳಿ ಇಟ್ಟಿದ್ದ ಸ್ಪ್ರೈಟ್ ಬಾಟಲ್​ಗೆ ನೀರು ತುಂಬಿಸಿಕೊಂಡು ಎರಚಿರುವುದು ಈ ಘಟನೆಗೆ ಕಾರಣ ಎಂದಿದ್ದಾರೆ.

ವಿಡಿಯೋ ಫುಟೇಜ್ ಪರಿಶೀಲಿಸಿ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಜೆಜೆ ಕಾಯ್ದೆ ಅಡಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಟಲಿಯಲ್ಲಿ ಯಾವ ದ್ರವ ಇತ್ತು ಎಂಬುದು ಫೋರೆನ್ಸಿಕ್ ಲ್ಯಾಬ್ ವರದಿ ಬಂದ ಬಳಿಕ ತಿಳಿಯಲಿದೆ ಎಂದು ತಿಳಿಸಿದರು.

ಬಾಲಕ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಇನಾಯತ್ ಉಲ್ಲಾ ಖಾನ್ ಬೆಂಬಲಿಗ. ಬೆಳಗಿನಿಂದಲು ಅಭ್ಯರ್ಥಿಯ ಜತೆಗೆ ಇದ್ದ ಎಂಬುದು ತಿಳಿದು ಬಂದಿದ್ದು, ಉದ್ದೇಶ ಪೂರ್ವಕವಾಗಿ ಈ ರೀತಿಯ ಕೃತ್ಯ ನಡೆಸಿಲ್ಲ ಎಂಬುದು ವಿಚಾರಣೆ ವೇಳೆ ಸ್ಪಷ್ಟವಾಗಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)