ಹಾವೇರಿ: 24 ವರ್ಷದ ಯುವತಿ ಮೇಲೆ ಯುವಕನೋರ್ವ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಕಟ್ಟಿಮನಿ ಗ್ಯಾರೇಜ್ ಬಳಿ ನಡೆದಿದೆ.
ಯುವತಿಯ ಮುಖ, ಕಣ್ಣು, ಕೈ ಮೇಲೆ ಆ್ಯಸಿಡ್ ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ.
ಯುವತಿ ಬ್ಯಾಡಗಿ ಪಟ್ಟಣದಲ್ಲಿ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಎಂದಿನಂತೆ ಸಂಜೆ ಬಸ್ ಇಳಿದು ಮನೆಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಯುವಕ ಆ್ಯಸಿಡ್ ದಾಳಿ ನಡೆಸಿದ್ದಾನೆ. ಪ್ರೀತಿ ನಿರಾಕರಿಸಿದ್ದೇ ಇದಕ್ಕೆ ಕಾರಣ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಜಿಲ್ಲಾಸ್ಪತ್ರೆಗೆ ತೆರಳಿದ ಶಾಸಕ ನೆಹರು ಓಲೇಕಾರ, ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲ್ದಂಡಿ ಯುವತಿಯ ಆರೋಗ್ಯ ವಿಚಾರಿಸಿದ್ದಾರೆ.
ಆರೋಪಿಯ ಬಂಧನಕ್ಕೆ ಪೊಲೀಸರು ತಂಡ ರಚನೆ ಮಾಡಿದ್ದು ಪ್ರಕರಣ ದಾಖಲಾಗಿದೆ.