ಟೀಕಿಸುವವರಿಗೆ ಸಾಧನೆಯೇ ಉತ್ತರ ಆಗಬೇಕು: ಡಾ.ವಿಜಯ ಸಂಕೇಶ್ವರ ಅಭಿಮತ

vrl

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಜೀವನದ ಕೊನೇ ಉಸಿರಿರುವವರೆಗೂ ಕಾಯಕದಲ್ಲಿ ತೊಡಗಬೇಕು. ಪರಿಶ್ರಮ, ನ್ಯಾಯಯುತ ಮಾರ್ಗದಲ್ಲಿ ಸಾಧನೆ ಮಾಡಬೇಕು. ಟೀಕಿಸುವವರಿಗೆ ನಾವು ಮಾಡುವ ಸಾಧನೆಯೇ ಉತ್ತರವಾಗಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಯುವಕರಿಗೆ ಸಲಹೆ ನೀಡಿದರು.

ನಗರದ ಕೆಎಲ್​ಎಸ್ ಕೆ.ಕೆ. ವೇಣುಗೋಪಾಲ ಸಭಾಂಗಣದಲ್ಲಿ ಗುರುದೇವ ರಾನಡೆ ಮಂದಿರದ ಶತಮಾನೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ಯೂತ್ ಕಾನ್ಪರೆನ್ಸ್’ನಲ್ಲಿ ತಮ್ಮ ಜೀವನಾನುಭವ ಕುರಿತು ಮಾತನಾಡಿದರು. ಕಷ್ಟದಲ್ಲಿ ಇರುವವರೇ ಸಾಧನೆ ಮಾಡುತ್ತಾರೆ. ವಿಜಯ ಸಂಕೇಶ್ವರ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಎನ್ನುವವರೇ ಹೆಚ್ಚು. ಆದರೆ, ನಾನು ನೂರು ಬಾರಿ ಬಿದ್ದಾಗ ಒಂದು ಬಾರಿ ಮೇಲೆದ್ದಿರುತ್ತೇನೆ. ಎಲ್ಲರೂ ಮೇಲೆದ್ದಾಗಲೇ ಮಾತನಾಡುತ್ತಾರೆ. ಅದರ ಹಿಂದಿನ ಪರಿಶ್ರಮ, ತಪಸ್ಸು ಬಹಳಷ್ಟಿರುತ್ತದೆ ಎಂದು ಹೇಳಿದರು.

ಜೀವನದಲ್ಲಿ ಗುರಿಯಿಲ್ಲದೆ ಸಾಯುವವರೆಗೆ ಬದುಕಬೇಕೆಂಬ ಮನೋಭಾವ ಇದ್ದರೆ, ಅದು ಸಮಾಜಕ್ಕೆ ಭಾರವಾದಂತೆ. ಹುಟ್ಟಿದ ಮೇಲೆ ಜೀವನ ಸಾರ್ಥಕವಾಗಬೇಕು. ಶ್ರೀಮಂತಿಕೆ, ಜನಪ್ರಿಯತೆ, ಯಶಸ್ಸುಗಳು ಜನರಿಗೆ ತೋರಿಸುವುದಕ್ಕಾಗಿ ಮಾಡಬಾರದು. ಏನೇ ಸಾಧನೆ ಮಾಡಿದರೂ ಸಂತೃಪ್ತಿ ಇರಬೇಕು. ಜನರಿಗೆ ಉಪಯೋಗ ಆಗಬೇಕು. ನಾನು ಒಂದು ಲಾರಿ ಆರಂಭಿಸಿದಾಗ ಇದ್ದ ಸಂತೃಪ್ತಿ ಪ್ರಸ್ತುತ 6 ಸಾವಿರಕ್ಕೂ ಅಧಿಕ ಲಾರಿಗಳು ಇರುವಾಗಲೂ ಹಾಗೇ ಇದೆ. ಜೀವನದಲ್ಲಿ ಸ್ಪರ್ಧಾತ್ಮಕ ಗುಣ ಬೆಳೆಸಿಕೊಳ್ಳಬೇಕು. ಗುರಿ ಇಟ್ಟುಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಟೀಕಿಸುವವರಿಗೆ ಸಾಧನೆಯೇ ಉತ್ತರ ಆಗಬೇಕು: ಡಾ.ವಿಜಯ ಸಂಕೇಶ್ವರ ಅಭಿಮತ

ಟೀಕೆಗೆ ಎದೆಗುಂದಬೇಡಿ: ಸಾಧನೆಯ ಹಾದಿಯಲ್ಲಿ ಹಲವು ಟೀಕೆಗಳು ಬರುತ್ತವೆ. ಅವುಗಳಿಗೆ ಗಮನಕೊಡಬಾರದು. ನಾನು ಉದ್ಯಮ ಆರಂಭಿಸಿದಾಗ ಪ್ರತಿಸ್ಪರ್ಧಿಗಳು ಹೀಯಾಳಿಸಿದರು. ಅವರನ್ನು ನನ್ನ ಹಿತೈಷಿಗಳೆಂದು ಪರಿಗಣಿಸಿ, ಅವರಿಗಿಂತ ಹೆಚ್ಚು ಲಾರಿ ತರುತ್ತೇನೆ ಎಂದಿದ್ದೆ. ಅವರು ಉದ್ಧಟತನ ಎಂದಿದ್ದರು. ‘ಟ್ರಾನ್ಸ್​ಪೋರ್ಟ್ ಉದ್ಯಮದಲ್ಲಿ ಪ್ರಾಮಾಣಿಕವಾಗಿದ್ದರೆ ಬೆಳೆಯುವುದಿಲ್ಲ’ಎಂದೂ ಕೆಲವರು ಹೇಳುತ್ತಿದ್ದರು. ವಾಮಮಾರ್ಗ ಹಿಡಿಯದೆ ಪರಿಶ್ರಮದಿಂದ ಉದ್ಯಮದಲ್ಲಿ ಸರ್ವೆವ್ ಆಗಿರುವೆ. ದಿನಪತ್ರಿಕೆ ಶುರು ಮಾಡಿದ ಸಂದರ್ಭದಲ್ಲಿ ಸಂಸದನಾಗಿದ್ದಾಗ ಕೇಂದ್ರದಲ್ಲಿ ಮಂತ್ರಿ ಸ್ಥಾನದ ಅವಕಾಶ ಬಂದಿತ್ತು. ಉದ್ಯಮ ನಡೆಸಲು ಸಮಯ ಕೊಡುವುದಕ್ಕೆ ಆಗದ ಕಾರಣ ಆ ಸ್ಥಾನ ತಿರಸ್ಕರಿಸಿದ್ದೆ. ಮಂತ್ರಿಯಾದರೆ ಕಡಿಮೆ ಸಮಯದಲ್ಲಿ ಉದ್ಯಮಕ್ಕೆ ಕೋಟ್ಯಂತರ ರೂಪಾಯಿ ಮಾಡಿಕೊಳ್ಳಬಹುದು ಎಂದು ಕೆಲವರು ಅಂದಿದ್ದರು. ಆದರೆ ಕುಲಗೆಡುವ ಕೆಲಸ ಎಂದೂ ಮಾಡಲಿಲ್ಲ ಎಂದು ಡಾ.ವಿಜಯ ಸಂಕೇಶ್ವರ ಹೇಳಿದರು.

25ರ ವಯಸ್ಸಿನವರಂತೆ ಸದೃಢನಿದ್ದೇನೆ: ಪ್ರತಿ ಯುವಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಒಬ್ಬ ಚಹಾ ಮಾರುವ ವ್ಯಕ್ತಿ ಪ್ರಧಾನಮಂತ್ರಿ ಆಗಿದ್ದಾರೆ ಎಂದರೆ ಅವರ ಪರಿಶ್ರಮ, ಕಾಯಕ, ತಪಸ್ಸು, ಗಟ್ಟಿತನ ಕಾರಣ. ತಿಂಗಳಲ್ಲಿ ನಾನು 22 ದಿನ ಪ್ರವಾಸದಲ್ಲಿರುತ್ತೇನೆ. 75 ವರ್ಷವಾದರೂ 25 ಹರೆಯ ಎನಿಸುತ್ತದೆ. ನಾವು ಆರೋಗ್ಯವಾಗಿ ಸದೃಢವಾಗಿದ್ದಾಗ ನೂರಾರು ಜನರಿಗೆ ಸಹಾಯ ಮಾಡಬಹುದು. ಯುವಕರು ತಮ್ಮ ಸಾಮರ್ಥವನ್ನು ಒರೆಗೆ ಹಚ್ಚಬೇಕು ಎಂದು ಸಂಕೇಶ್ವರ ಕಿವಿಮಾತು ಹೇಳಿದರು. ಕೈಗಾರಿಕೋದ್ಯಮಿ ಗೋಪಾಲ ಜಿನಗೌಡ ಅಧ್ಯಕ್ಷತೆ ವಹಿಸಿದ್ದರು. ಎಸಿಪಿಆರ್ ಪ್ರಧಾನ ಕಾರ್ಯದರ್ಶಿ ಮಾರುತಿ ಝೀರಲಿ ಇದ್ದರು.

ಸಂಸ್ಕೃತಿ ಮುಖ್ಯ: ನಾವು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲಿ, ನಮ್ಮತನ ಮರೆಯುತ್ತಿದ್ದೇವೆ. ಇದು ಭಾರತದ ಭವ್ಯ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಜಗತ್ತಿನಲ್ಲಿ ಏನೇ ಬದಲಾವಣೆಯಾದರೂ ಜಪಾನ್, ಚೀನಾ ಇತರ ದೇಶಗಳು ಯಾವತ್ತೂ ತಮ್ಮತನ ಬಿಟ್ಟು ಕೊಡಲಿಲ್ಲ. ಜಪಾನ್ ಸರ್ವನಾಶವಾದ ಮೇಲೂ ಅಲ್ಲಿ ನಮಗಿಂತ 10 ಪಟ್ಟು ಬುದ್ಧಿವಂತರು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ವೈದ್ಯರು ಇದ್ದಾರೆ. ಇದಕ್ಕೆ ಕಾರಣ ಅವರು ಅಲ್ಲಿನ ಭಾಷೆ, ಸಂಸ್ಕೃತಿ ಮರೆಯಲಿಲ್ಲ. ಚೀನಾ ಕೂಡ ಹಾಗೆಯೇ. ಈಚೆಗೆ ಹಿಂದಿ ಭಾಷೆ ಹೇರಿಕೆ ಸರಿಯಲ್ಲ ಎಂಬು ಮಾತುಗಳು ಕೇಳಿ ಬಂದವು. ಆದರೆ, ಜಗತ್ತಿನಲ್ಲಿ ‘ಚೀನಿಸ್’ ಹೆಚ್ಚು ಬಳಕೆಯಾಗುತ್ತಿದೆ. ನಂತರದಲ್ಲಿ ಹಿಂದಿ, ಇಂಗ್ಲಿಷ್ ಇದೆ. ನಾನು 50-60 ದೇಶಗಳನ್ನು ಸುತ್ತಿದ್ದೇನೆ. ಯುನೈಟೆಡ್ ಕಿಂಗ್​ಡಮ್ ಬ್ರಿಟಿಷರ ಇಂಗ್ಲಿಷ್ ಪ್ರಭಾವ, 8 ಸಾವಿರ ಕಿ.ಮೀ. ದೂರದ ಭಾರತದ ಮೇಲೆ ಬೀರಿತೇ ಹೊರತು ಪಕ್ಕದ 200, 400 ಕಿ.ಮೀ. ಆಸುಪಾಸಿನಲ್ಲಿದ್ದ ಇತರ ದೇಶಗಳ ಮೇಲೆ ಬೀರಲೇ ಇಲ್ಲ. ಫ್ರಾನ್ಸ್, ಜರ್ಮನಿ, ಸ್ವೀಡನ್, ಡೆನ್ಮಾರ್ಕ್ ಇತರ ದೇಶಗಳು ಸ್ವಂತಿಕೆ ಉಳಿಸಿಕೊಂಡಿವೆ. ತಮ್ಮ ಭಾಷೆ, ಸಂಸ್ಕೃತಿ ಗಟ್ಟಿಯಾಗಿಸಿಕೊಂಡಿವೆ. ಈಗಲೂ ಭಾರತದ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಜಪಾನಿನ ಹುಡಗಿಯರನ್ನು ಮದುವೆಯಾದರೆ ಆ ಜಪಾನ್ ಹುಡುಗಿಯರು ಜನಿಸುವ ಮಗುವನ್ನು 5-10 ವರ್ಷ ಅಲ್ಲಿಯೇ ಬಿಟ್ಟು ಅಲ್ಲಿಯ ಸಂಸ್ಕೃತಿ ಕಲಿಸುವುದು ಟ್ರೆಂಡ್ ಆಗಿದೆ. ಜಪಾನಿಗರು ಆ ದೇಶದ ಕಂಪನಿಯಲ್ಲಿ ಉದ್ಯೋಗ ಪಡೆದರೆ ಯಾವುದೇ ಸಂದರ್ಭದಲ್ಲಿ ಹೊರ ಹೋಗುವುದಿಲ್ಲ. ಅಕಸ್ಮಾತ್ ಆಗಿ ಹೊರಹೋದರೆ ಅಂತಹ ಬೇರೆ ಕಂಪನಿ ಸಿಗುವುದಿಲ್ಲ. ಜತೆಗೆ ಮಾತೃ ಸಂಸ್ಥೆಗೆ ದ್ರೋಹ ಬಗೆದಂತೆ ಭಾವಿಸುತ್ತಾರೆ ಎಂದರು. ಜಗತ್ತಿನಲ್ಲಿ ಗಂಡ-ಹೆಂಡಿರ ಡಿವೋರ್ಸ್ ಪ್ರಕರಣಗಳು ಜಪಾನಿನಲ್ಲಿ ಕಡಿಮೆ. ಜೀವನ ಮೌಲ್ಯ ಅವರಿಗೆ ಜಾಸ್ತಿ ಗೊತ್ತಿದೆ. ನಮ್ಮ ದೇಶದಲ್ಲಿ ಮೊದಲು ಜಪಾನ್ ಮಾದರಿಯ ಸಂಸ್ಕೃತಿ ಇತ್ತು. ಈಗ ಅದು ಮರಳಬೇಕಿದೆ ಎಂದು ಡಾ.ವಿಜಯ ಸಂಕೇಶ್ವರ ಹೇಳಿದರು.

ವಿಭಿನ್ನವಾಗಿ ಚಿಂತಿಸಿ: ಉದ್ಯಮದ ಆರಂಭದಲ್ಲಿ ಲಾರಿ ಟೈಯರ್ ಹಾಳಾದರೆ 5 ಸಾವಿರ ಖರ್ಚು ಮಾಡಬೇಕಿತ್ತು. 200 ರೂ.ಬಡ್ಡಿ ಕಟ್ಟುವುದಕ್ಕೂ ಕಷ್ಟ ಇತ್ತು. ನನ್ನ ಬಳಿ ಇದ್ದ ಸ್ಕೂಟರ್ ಮಾರಾಟ ಮಾಡಿ, ಟೈಯರ್ ಹಾಕಿಸಿ, ಕೊನೆಗೆ ಸೈಕಲ್ ಬಳಸುತ್ತಿದ್ದೆ. ಬಹಳಷ್ಟು ಬ್ಯಾಂಕ್ ಉದ್ಯೋಗಿಗಳು 52, 53 ವರ್ಷಕ್ಕೆ ವ್ಯಾಲಂಟರಿ ನಿವೃತ್ತಿ ಪಡೆದು, ಮಕ್ಕಳ ಮದುವೆ ಮಾಡಿ ಹಾಯಾಗಿದ್ದೇವೆಂದು ಹೇಳುತ್ತಾರೆ. ಆದರೆ, ನನಗೆ 75 ವರ್ಷವಾದರೂ ಇನ್ನೂ ಕೆಲಸ ಮಾಡುವುದು ಬಹಳಷ್ಟಿದೆ ಎನಿಸುತ್ತಿದೆ. ಭಾರತದ ಕೆಲ ಪ್ರದೇಶಗಳಿಗೆ ನಮ್ಮ ಸೇವೆ ಮುಟ್ಟಿಲ್ಲ ಎಂಬ ಕೊರಗಿದೆ. 20 ವರ್ಷದ ಹಿಂದೆ ವಿಮಾನ ಖರೀದಿಸಿದೆ, ಆಡಂಬರಕ್ಕೆ ಅಲ್ಲ. ವಿಮಾನದಲ್ಲಿ ಪ್ರಯಾಣಿಸುವುದರಿಂದ ವರ್ಷದ 365 ದಿನದಲ್ಲಿ 200 ದಿನ ಉಳಿಯುತ್ತದೆ. ಎಲ್ಲದಕ್ಕೂ ಲೆಕ್ಕ ಹಾಕಿಕೊಂಡು ಕುಳಿತುಕೊಳ್ಳಬಾರದು. ವಿಭಿನ್ನವಾಗಿ ಚಿಂತಿಸಿ, ವಿಶೇಷ ವಾದುದನ್ನು ಮಾಡಬೇಕು ಎಂದು ಸಂಕೇಶ್ವರ ಹೇಳಿದರು.

ಹೊಸ ಇತಿಹಾಸ ಸೃಷ್ಟಿ: ನಾವು ಹೊಸ ಪತ್ರಿಕೆ ಆರಂಭಿಸಿದಾಗ ಎರಡು ವರ್ಷದಲ್ಲಿ 8 ಕೇಂದ್ರಗಳಿಂದ ಮುದ್ರಣ ಮಾಡಿ 5 ಲಕ್ಷ ಪತ್ರಿಕೆಗಳ ಪ್ರಸರಣ ವಾಗುತ್ತೆ ಎಂದು ಹೇಳಿದ್ದೆವು. ಒಳ್ಳೆಯ ಪ್ರೊಡಕ್ಟ್ ಅನ್ನು ಒಳ್ಳೆಯ ದರಕ್ಕೆ ನೀಡಿದ್ದರಿಂದ 7.50 ಲಕ್ಷ ಪ್ರತಿಗಳ ಪ್ರಸರಣ ಸಂಖ್ಯೆ ಹೊಂದಿ ಇತಿಹಾಸ ಸೃಷ್ಟಿಸಿತು. ಹೊಸ ಓದುಗರನ್ನು ಸೃಷ್ಟಿಸಿದ್ದೇವೆ. ಮಕ್ಕಳು, ಮಹಿಳೆಯರು, ಕೃಷಿಕರೂ ಪತ್ರಿಕೆ ಓದುವುದಕ್ಕೆ ಆರಂಭಿಸಿದರು. ಡಾ. ರಾಜಕುಮಾರ್ ಅಪಹರಣ ಪ್ರಕರಣದ ಲೇಟೆಸ್ಟ್ ಸುದ್ದಿ ನಮ್ಮ ಪತ್ರಿಕೆಯಲ್ಲಿ ಪ್ರಕಟವಾದಾಗ ಹೊಸ ಅಲೆ ಸೃಷ್ಟಿಯಾಗಿತ್ತು. ಇದೆಲ್ಲ ಹೆಚ್ಚು ಮುದ್ರಣ ಕೇಂದ್ರಗಳನ್ನು ಮಾಡಿದ್ದರಿಂದ ಸಾಧ್ಯವಾಯಿತು. ವಿಜಯ ಸಂಕೇಶ್ವರ ಅವರು, ಇತರ ಉದ್ಯಮದಾರರಿಗೆ ತೊಂದರೆ ಕೊಟ್ಟರು ಎಂಬೆಲ್ಲ ಮಾತುಗಳು ವ್ಯಕ್ತವಾದವು. ಆದರೆ, ನಾವು ನೈತಿಕವಾಗಿ ಪತ್ರಿಕೆ ಮುನ್ನಡೆಸಿದ್ದೇವೆ. ನಮ್ಮ ಪತ್ರಿಕೆ ಬಂದ ನಂತರ ಎಲ್ಲ ಪತ್ರಿಕೆಗಳ ಗುಣಮಟ್ಟದಲ್ಲಿ ಅಮೂಲಾಗ್ರ ಬದಲಾವಣೆಯಾಗಿ, ಸ್ಪರ್ಧೆ ಹೆಚ್ಚಾಗಿ ಗುಣಮಟ್ಟದ ಸುದ್ದಿ ಪ್ರಸರಣ ಶುರುವಾಯಿತು ಎಂದು ಡಾ.ವಿಜಯ ಸಂಕೇಶ್ವರ ತಿಳಿಸಿದರು.

ನಿವೃತ್ತಿಯಾದರೂ ಕಾಯಕ ಮರೆಯಬಾರದು…: ನಮ್ಮ ತಂದೆಗೆ 10ನೇ ತರಗತಿ ಕಲಿಯುವುದಕ್ಕೆ ದುಡ್ಡು ಇರಲಿಲ್ಲ. ರೈಲ್ವೆಯಲ್ಲಿ ಕೆಲಸ ಮಾಡಿದರು. ಬಳಿಕ ಪುಸ್ತಕದಂಗಡಿಯಲ್ಲಿ ಕೆಲಸ ಮಾಡಿ, ಪಬ್ಲಿಷರ್ ಆದರು. ನಮ್ಮದು 90 ವರ್ಷದ ಉದ್ಯಮವಾಗಿತ್ತು. ನಾನು 15 ವರ್ಷದವನಿದ್ದಾಗ ಕೆಲ ವರ್ಷ ಆ ಉದ್ಯಮ ಮುಂದುವರಿಸಿದೆ. ಆ ವೇಳೆಯೂ ರಜೆ ಇಲ್ಲದೆ ಕೆಲಸ ಮಾಡಿದ್ದೆ. ತಂದೆ ಅವರು ಮುನ್ನಡೆಸುತ್ತಿದ್ದಾಗ ವರ್ಷಕ್ಕೆ 80, 90 ರಜೆ ಇರುತ್ತಿದ್ದವು. ನಾನು ಯಾವುದೇ ಹಬ್ಬದಲ್ಲೂ ರಜೆ ಮಾಡುತ್ತಿರಲಿಲ್ಲ. ಪ್ರಸ್ತುತ ವಿಆರ್​ಎಲ್ ಕಂಪನಿಯಲ್ಲಿ 60 ವರ್ಷ ಮೇಲ್ಪಟ್ಟ ಬಹಳ ಉದ್ಯೋಗಿಗಳಿದ್ದಾರೆ. ನಿವೃತ್ತಿ ಎನ್ನುವುದು ಉಸಿರು ನಿಂತ ಮೇಲೆ ಎಂದು ನಾವು ನಂಬಿದ್ದೇವೆ. ಒಬ್ಬ ವ್ಯಕ್ತಿ ಪರಿಪೂರ್ಣ ಆಗಬೇಕು ಎಂದರೆ 60 ವರ್ಷ ಬೇಕು. 60 ವರ್ಷಕ್ಕೆ ನಿವೃತ್ತಿಯಾದರೆ ಅವನ ಅನುಭವ, ಪಡೆದ ತರಬೇತಿ ಸೊಸೈಟಿ ಹಾಗೂ ಕಂಪನಿಗೆ ಸಿಗುವುದಿಲ್ಲ. ಹೀಗಾಗಿ ನಿವೃತ್ತಿಯಾದರೂ ಕಾಯಕ ಮರೆಯಬಾರದು ಎಂದು ಡಾ.ಸಂಕೇಶ್ವರ ಅಭಿಪ್ರಾಯಪಟ್ಟರು.

‘ಹರ್ ಘರ್ ತಿರಂಗ’ ಅಭಿಯಾನ: ರಾಷ್ಟ್ರಧ್ವಜದ ಜೊತೆ ಸೆಲ್ಫೀ ಕ್ಲಿಕ್ಕಿಸಿ ಅಪ್​ಲೋಡ್ ಮಾಡಲು ಅಮಿತ್ ಷಾ ಮನವಿ

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…