ಶಿವಮೊಗ್ಗ: ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಸಂಶೋಧನಾ ಪ್ರಕ್ರಿಯೆಗೆ ಬಳಸಿಕೊಂಡು ಶೈಕ್ಷಣಿಕ ಉನ್ನತಿ ಹೊಂದಬೇಕು ಎಂದು ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಶೈಕ್ಷಣಿಕ ಉತ್ಕೃಷ್ಟತೆಗಾಗಿ ಇ-ಸಂಪನ್ಮೂಲಗಳು ವಿಷಯ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾಸಂಸ್ಥೆಗೆ ಗ್ರಂಥಾಲಯ ಎಂಬುದು ಗರ್ಭಗುಡಿಯಿದ್ದಂತೆ. ನಮ್ಮ ಹಿರಿಯರು ತಾಳೆಗರಿ, ಪತ್ರಗಳ ಮೂಲಕ ಜೀವನಾನುಭವದ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ನೀಡಿದ್ದಾರೆ. ಇಂದು ಎಲ್ಲವೂ ಡಿಜಿಟಲೀಕರಣಗೊಂಡಿದೆ ಎಂದು ತಿಳಿಸಿದರು.
ಗ್ರಂಥಾಲಯಕ್ಕೆ ತೆರಳಿಯೇ ವಿಭಿನ್ನ ವಿಚಾರಗಳ ಬಗ್ಗೆ ತಿಳಿಯಬೇಕು ಎಂಬ ಕಾಲದಿಂದ ದೂರ ಬಂದಿದ್ದೇವೆ. ಡಿಜಿಟಲೀಕರಣಗೊಂಡರೂ ಅದನ್ನು ನಿರ್ಮಾಣ ಮಾಡುವುದು ಮತ್ತು ಬಳಸುವುದು ಮನುಷ್ಯರೇ ಆಗಿದ್ದಾರೆ. ಲಭ್ಯವಿರುವ ಸಂಪನ್ಮೂಲಗಳ ಸಮುದ್ರವನ್ನು ಬಳಸಿಕೊಳ್ಳಲು ಪ್ರೇರಣೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಟಿಯು ಮುಖ್ಯ ಗ್ರಂಥಪಾಲಕ ಡಾ. ಸೋಮರಾಯ ಬಿ.ತಳೊಳ್ಳಿ ಮಾತನಾಡಿ, ಇ-ಸಂಪನ್ಮೂಲಗಳನ್ನು ಸಂಶೋಧನಾರ್ಥಿಗಳಿಗೆ ಮತ್ತಷ್ಟು ಹತ್ತಿರವಾಗಿಸುವ ಕಾರ್ಯವನ್ನು ವಿಟಿಯು ಮಾಡುತ್ತಿದೆ. ಎಲ್ಲ ಇಂಜಿನಿಯರಿಂಗ್ ಕಾಲೇಜುಗಳ ಗ್ರಂಥಾಲಯಗಳು ನಾವೀನ್ಯಯುತ ಸಂಪನ್ಮೂಲಗಳನ್ನು ಅಧ್ಯಯನ ಮಾಡುವ ಸೌಲಭ್ಯ ನೀಡುತ್ತಿದೆ ಎಂದು ಹೇಳಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮಾತನಾಡಿ, ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತವಾಗಿದೆ. ಡಿಜಿಟಲ್ ಯುಗ ಕಾರಣವಿರಬಹುದು. ಅಂತಹ ಡಿಜಿಟಲ್ ಯುಗದಲ್ಲಿ ಐದು ಸಾವಿರಕ್ಕೂ ಹೆಚ್ಚು ವಿವಿಧ ಪ್ರಕಾಶನಗಳು ಲಭ್ಯವಿದೆ. ಡಿಜಿಟಲ್ ಅಧ್ಯಯನ ಸೌಕರ್ಯಗಳು ನಿಜವಾಗಿಯೂ ವಿದ್ಯಾರ್ಥಿಗಳನ್ನು ತಲುಪುತ್ತಿದ್ದೆಯೇ ಎಂಬ ಸಮೀಕ್ಷೆ ನಡೆಸಲು ವಿವಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಕಾಲೇಜಿನ ಗ್ರಂಥಪಾಲಕ ಚಂದ್ರಕಾಂತ್ ಆರ್.ಭಟ್, ಉಪಗ್ರಂಥಪಾಲಕ ಕೆ.ಟಿ.ಸತೀಶ್ ಇತರರಿದ್ದರು.