ನಕಲಿ ನೋಟು ದಂಧೆ ಆರೋಪಿ ಸೆರೆ

ಬೆಂಗಳೂರು: ಬಾಂಗ್ಲಾ ಗಡಿಯಿಂದ ಬೆಂಗಳೂರಿಗೆ ನಕಲಿ ನೋಟು ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಹೈದ್ರಾಬಾದ್ ವಿಭಾಗದ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.

ಬಿಹಾರದ ಪೂರ್ವ ಚಂಪಾರಣ್ ನಿವಾಸಿ ಎಸ್.ಕೆ. ತಜಾಮುಲ್(28) ಬಂಧಿತ. ಎನ್​ಐಎ ಅಧಿಕಾರಿಗಳು, ಮೇ 23ರಂದು ಬಿಹಾರದ ಸ್ಥಳೀಯ ಕೋರ್ಟ್​ನಲ್ಲಿ ಅನುಮತಿ ಪಡೆದು ವಿಜಯವಾಡ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದಾರೆ.

2018ರ ಮಾ.31ರಂದು ವಿಶಾಖಪಟ್ಟಣದಲ್ಲಿ ಮೆಹಬೂಬ್ ಎಂಬಾತನನ್ನು ಬಂಧಿಸಿ 10.2 ಲಕ್ಷ ರೂ. ಮೌಲ್ಯದ ನಕಲಿ ನೋಟು ಜಪ್ತಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸದ್ದಾಂ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಜಾಮುಲ್ ಸುಳಿವು ಲಭ್ಯವಾಗಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಕೋರ್ಟ್​ಗೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಭಾರತ ಮತ್ತು ಬಾಂಗ್ಲಾ ಗಡಿಯಿಂದ ದೇಶದ ಒಳಗೆ ಬರುತ್ತಿರುವ ಪಾಕ್ ನಕಲಿ ನೋಟು ದಂಧೆಕೋರರ ಜತೆ ಬಂಧಿತರಿಗೆ ಸಂಪರ್ಕವಿತ್ತು. ನಕಲಿ ನೋಟುಗಳನ್ನು ಬೆಂಗಳೂರಿನಲ್ಲಿ ಚಲಾವಣೆ ಮಾಡಿ ಅದರಿಂದ ಬರುತ್ತಿದ್ದ ಅಸಲಿ ನೋಟುಗಳನ್ನು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದ. ಬೆಂಗಳೂರು ಮತ್ತು ಮಾಲ್ಡಾದಲ್ಲಿ ನಕಲಿ ನೋಟು ದಂಧೆಯಲ್ಲಿ ತೊಡಗಿರುವ ಅಂತಾರಾಜ್ಯ ಗ್ಯಾಂಗ್​ನ ಹಲವು ಆರೋಪಿಗಳ ಕುರಿತ ಮಾಹಿತಿ ಬೆಳಕಿಗೆ ಬಂದಿದೆ ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *