ಸ್ನೇಹಿತನ ಆತ್ಮಕ್ಕೆ ಹೆದರಿ ಮೂರು ವರ್ಷದ ಹಿಂದಿನ ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿ

ಬೆಂಗಳೂರು: ಪ್ರತಿನಿತ್ಯ ಕನಸಲ್ಲಿ ಬರುತ್ತಿದ್ದ ಆತ್ಮಕ್ಕೆ ಹೆದರಿ ಮೂರು ವರ್ಷದ ಹಿಂದೆ ಮಾಡಿದ್ದ ಸ್ನೇಹಿತನ ಕೊಲೆ ರಹಸ್ಯವನ್ನು ಆರೋಪಿಯೊಬ್ಬ ಬಹಿರಂಗಪಡಿಸಿದ್ದಾನೆ.

ಅಭಿಷೇಕ್​ ಕೊಲೆ ರಹಸ್ಯ ತಿಳಿಸಿದ ಆರೋಪಿ. ದಿನೇಶ್​ ಹಾಗೂ ಅಭಿಷೇಕ್​ ಇಬ್ಬರು ಸ್ನೇಹಿತರಾಗಿದ್ದರು. 2016ರ ಮಾರ್ಚ್​ 16ರಂದು ರೈಲ್ವೆ ಹಳಿ ಮೇಲೆ ದಿನೇಶ್​ ಶವವಾಗಿ ಪತ್ತೆಯಾಗಿದ್ದ. ರೈಲು ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾನೆ ಎಂದು ಅಭಿಷೇಕ್​ ಎಲ್ಲರನ್ನು ನಂಬಿಸಿದ್ದ.

ಆದರೆ, ಇತ್ತೀಚಿನ ದಿನಗಳಲ್ಲಿ ಅಭಿಷೇಕ್​ ಕನಸಿನಲ್ಲಿ ದಿನೇಶ್​ ಬರುತ್ತಿದ್ದನಂತೆ. ಇದರಿಂದ ತನ್ನ ತಪ್ಪಿನ ಅರಿವಾಗಿ ದಿನೇಶ್​ ಸಮಾಧಿಗೆ ಪೂಜೆ ಸಲ್ಲಿಸಿ ಕ್ಷಮೆಯಾಚಿಸಿದ್ದ. ಇದೇ 13 ರಂದು ಕುಡಿದ ಮತ್ತಿನಲ್ಲಿ ನಿಮಗೆ ತಿಳಿಯದಂತೆ ದೊಡ್ಡ ತಪ್ಪು ಮಾಡಿದ್ದೇನೆ ಎಂದು ಹೇಳಿ ಕೊಲೆ ರಹಸ್ಯ ಬಹಿರಂಗಪಡಿಸಿದ್ದಾನೆ.

ಅಂದು ಅಮೃತ ವೈನ್ಸ್​ನಲ್ಲಿ ಪಾರ್ಟಿ ಮುಗಿದ ಬಳಿಕ ನಾನು ಮತ್ತು ದಿನೇಶ್​ ಮನೆಗೆ ಹೊರಟಿದ್ದೆವು, ನಾಯಂಡಹಳ್ಳಿಯ ರೈಲ್ವೆ ಗುಡ್ಡೆ ಬಳಿ ಹೋದಾಗ, ಹಣಕಾಸಿನ ವಿಚಾರವಾಗಿ ನಮ್ಮಿಬ್ಬರ ನಡುವೆ ಜಗಳವಾಯಿತು. ಆಗ ರೈಲು ಬರುತ್ತಿದ್ದ ಸಮಯಕ್ಕೆ ದಿನೇಶನನ್ನು ಮುಂದೆ ತಳ್ಳಿ ಕೊಲೆ ಮಾಡಿದೆ ಎಂದು ಸ್ನೇಹಿತರಿಗೆ ಹೇಳಿಕೊಂಡಿದ್ದಾನೆ.

ಈ ವಿಚಾರವನ್ನು ದಿನೇಶ್ ತಂದೆಗೆ ಹೇಳಿದ ನಂತರ ಅಭಿಷೇಕ್​ ವಿರುದ್ಧ ದೂರು ದಾಖಲಿಸಿದಾಗ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರ ಮುಂದೆಯೂ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ. ಸಿಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)