ಸಾಸ್ವೆಹಳ್ಳಿ: ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ಹೋಬಳಿಯ ಬೈರನಹಳ್ಳಿಯಲ್ಲಿ ಬುಧವಾರ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸರ್ಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಪಂಚಾಕ್ಷರಯ್ಯ ಮಾತನಾಡಿ, ಪ್ರತಿದಿನ ಬೆಳಗ್ಗೆ 8:15ಕ್ಕೆ ಗ್ರಾಮಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಇತ್ತೀಚೆಗೆ ಪ್ರತಿದಿನ ಬೆಳಗ್ಗೆ 7.30ಕ್ಕೆ ಬರುತ್ತಿದೆ. ಇದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆ ಈ ಸಮಯಕ್ಕೆ ಬರಲು ಆಗುತ್ತಿಲ್ಲ. ಆದ್ದರಿಂದ ಮೊದಲಿನಂತೆ 8.15ಕ್ಕೆ ಬಸ್ ಬರಲಿ ಎಂದು ಆಗ್ರಹಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿನಿ ಸಾನ್ವಿ ಮಾತನಾಡಿ, ಪ್ರತಿದಿನ ಬಸ್ ಅರ್ಧ ಗಂಟೆ ಮುಂಚೆ ಬರುವುದರಿಂದ ಮನೆಯಲ್ಲಿ ತಿಂಡಿ ತಿನ್ನಲು ಆಗುತ್ತಿಲ್ಲ. ಜತೆಗೆ, ಬೇಗ ಶಾಲೆ ತಲುಪಿದರೂ 2 ಗಂಟೆಗಳ ಕಾಲ ಶಾಲೆ ಹೊರಗೆ ಕಾಯಬೇಕಾಗಿದೆ. ಆದ್ದರಿಂದ ಬಸ್ 8:15ಕ್ಕೆ ಬಂದರೆ ಅನುಕೂಲ ಎಂದು ಹೇಳಿದರು.
ಈ ಕುರಿತು ಬಸ್ ಚಾಲಕ ಗಿರೀಶ್, ನಿರ್ವಾಹಕ ಸಂದೀಪ್ ಮಾತನಾಡಿ, ಈ ರೂಟ್ ಜತೆಗೆ ನಮಗೆ ಇನ್ನೊಂದು ಬಸ್ ರೂಟ್ ಸಹ ಕೊಟ್ಟಿದ್ದಾರೆ. ಹಾಗಾಗಿ, ಅಲ್ಲಿಗೆ ಹೋಗಬೇಕಾದ ಕಾರಣ ಬಸ್ ಡಿಪೋದಿಂದ ಬಿಡುವ ಸಮಯ ಬದಲಾವಣೆ ಆಗಿದೆ ಎಂದು ತಿಳಿಸಿದರು.
ನಂತರ ಗ್ರಾಮಸ್ಥರು ದೂರವಾಣಿ ಮೂಲಕ ಶಾಸಕ ಡಿ.ಜಿ. ಶಾಂತನಗೌಡ ಅವರಿಗೆ ಸಂಪರ್ಕಿಸಿ ಆಗುತ್ತಿರುವ ಸಮಸ್ಯೆ ವಿವರಿಸಿದರು. ಶಾಸಕರು, ಶೀಘ್ರ ಸಮಯ ಬದಲಾಯಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ವಿದ್ಯಾರ್ಥಿಗಳಾದ ಉಮಾ, ಕೃಪಾ, ಲಾವಣ್ಯಾ, ದಿವ್ಯಾ, ಯಶಸ್ವ್ವಿನಿ, ಶಬರಿ, ಪೃಥ್ವಿ, ಕ್ಯಾಸಿನಕೆರೆ ಗ್ರಾಪಂ ಸದಸ್ಯ ಬಿ.ಎಂ. ಕುಮಾರ್, ಸ್ವಸಹಾಯ ಮಹಿಳಾ ಸಂಘದ ಶ್ರೀನಿಧಿ, ನೀಲಮ್ಮ, ಅಂಜಲಿ, ಭಾಗ್ಯಾ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.