ಕೆಎಸ್‌ಆರ್‌ಟಿಸಿ ನಿರ್ವಾಹಕ ಆತ್ಮಹತ್ಯೆ ಯತ್ನ

ನಂಜನಗೂಡು: ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಕೆಎಸ್‌ಆರ್‌ಟಿಸಿ ನಿರ್ವಾಹಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆ.ಆರ್.ನಗರ ನಿವಾಸಿ ಧರ್ಮೇಂದ್ರಗೌಡ ಆತ್ಮಹತ್ಯೆಗೆ ಮುಂದಾದ ನಿರ್ವಾಹಕ. ಭಾನುವಾರ ಬೆಳಗ್ಗೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ವಿಷ ಕುಡಿದಿದ್ದು, ಕೂಡಲೇ ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಂಜನಗೂಡು-ಕಡುಬೂರು ಮಾರ್ಗದ ಬಸ್ ನಿರ್ವಾಹಕನಾಗಿ ಧರ್ಮೇಂದ್ರಗೌಡ ಕೆಲಸ ಮಾಡುತ್ತಿದ್ದರು. ಶನಿವಾರ ಕರ್ತವ್ಯದ ವೇಳೆ ಶೆಟ್ಟಹಳ್ಳಿ ಗ್ರಾಮದ ಬಳಿ ಪ್ರಯಾಣಿಕರು ಹತ್ತಿದ ಸಂದರ್ಭ ಟಿಕೆಟ್ ತಪಾಸಣೆಗೆ ಬಂದ ಅಧಿಕಾರಿಯು ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಲು ಮುಂದಾಗಿದ್ದಾರೆ. ಈ ವೇಳೆ ಮನವೊಲಿಸಲು ಪ್ರಯತ್ನಿಸಿದ ಧರ್ಮೆಂದ್ರಗೌಡ ಈಗಷ್ಟೇ ಪ್ರಯಾಣಿಕರು ಬಸ್ ಹತ್ತಿದ್ದು ಟಿಕೆಟ್ ನೀಡುವಷ್ಟರಲ್ಲಿ ತಪಾಸಣೆಗೆ ಬಂದಿದ್ದಾಗಿ ಸಮಜಾಯಿಷಿ ನೀಡಿದರೂ ಅಧಿಕಾರಿಗಳು ಒಪ್ಪದೆ ನೊಟೀಸ್ ಜಾರಿ ಮಾಡಿದ್ದಾರೆ.

ಈ ರೀತಿ ಅನೇಕ ಬಾರಿ ವಿನಾಕಾರಣ ಅಧಿಕಾರಿಗಳು ದಂಡ ವಿಧಿಸಿ ಶಿಕ್ಷೆ ನೀಡುತ್ತಿದ್ದು, ಕಿರುಕುಳ ಹೆಚ್ಚಾಗಿದೆ ಎಂದು ಶನಿವಾರ ರಾತ್ರಿ ತನ್ನ ಪತ್ನಿ ಜಾನಕಿಗೆ ಕರೆ ಮಾಡಿ ಅಲವತ್ತುಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಯತ್ನ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳ ಕಿರುಕುಳವೇ ಕಾರಣ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ನಿ ಜಾನಕಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.