ನವದೆಹಲಿ: ಅತ್ಯಾಚಾರದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಹೆಸರಿನ ಟಾಟೂ ದೂರು ನೀಡಿದ ಮಹಿಳೆಯ ಮುಂದೋಳಿನ ಮೇಲೆ ಇರುವ ವಿಚಿತ್ರ ಸನ್ನಿವೇಶವೊಂದು ಇತ್ತೀಚೆಗೆ ದೆಹಲಿ ಹೈಕೋರ್ಟ್ ಮುಂದೆ ಬಂದಿದೆ. ಆರೋಪಿಯೇ ಮನೆಯಲ್ಲಿ ಕೂಡಿಟ್ಟು ಬಲವಂತವಾಗಿ ಟಾಟೂ ಹಾಕಿಸಿದ ಎಂಬ ಮಹಿಳೆಯ ಮಾತಿನ ಮೇಲೆ ಅನುಮಾನ ಪಟ್ಟಿರುವ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.
ದೆಹಲಿ ನಿವಾಸಿ ಮಹಿಳೆಯೊಬ್ಬಳು ಸ್ವತ್ತನ್ನು ಅಡ ಇಡುವ ಸಂಬಂಧವಾಗಿ ವರ್ಷಗಳ ಹಿಂದೆ ಆರೋಪಿಯನ್ನು ಭೇಟಿಯಾದೆ. ಒಂದು ದಿನ ತಂಪು ಪಾನೀಯದಲ್ಲಿ ಔಷಧಿ ಸೇರಿಸಿ ಜ್ಞಾನ ತಪ್ಪಿಸಿದ. ನಂತರ ನಗ್ನ ಫೋಟೋ ಮತ್ತು ವೀಡಿಯೋಗಳನ್ನು ತೆಗೆದು, ಬ್ಲಾಕ್ಮೇಲ್ ಮಾಡಿ ಲೈಂಗಿಕ ಸಂಪರ್ಕ ಬೆಳೆಸಿದ. ಈ ರೀತಿಯಾಗಿ ಮೇ 2019 ರವರೆಗೆ ಶೋಷಿಸಿದ ಎಂದು ದೂರು ನೀಡಿದ್ದಳು. 2020ರ ಜನವರಿಯಿಂದ ಏಪ್ರಿಲ್ವರೆಗೆ ಅವನ ಮನೆಯಲ್ಲಿ ಕೂಡಿಟ್ಟು ಅತ್ಯಾಚಾರ ನಡೆಸಿದ. ತನ್ನ ಹೆಸರನ್ನು ಬಲವಂತವಾಗಿ ಟಾಟೂ ಮಾಡಿಸಿದ ಎಂದು ಆರೋಪಿಸಿದ್ದಳು.
ಇದನ್ನೂ ಓದಿ: ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್
ಜಾಮೀನು ಅರ್ಜಿ ಸಲ್ಲಿಸಿದ್ದ ಆರೋಪಿಯ ವಕೀಲರು, ದೂರು ನೀಡಿರುವ ವಿವಾಹಿತ ಮಹಿಳೆ, ತನ್ನ ಸ್ವಂತ ಒಪ್ಪಿಗೆಯಿಂದ ಆರೋಪಿಯೊಡನೆ ಸಂಬಂಧ ಹೊಂದಿದ್ದಳು. ಅವನ ಹೆಸರನ್ನು ಟಾಟೂ ಮಾಡಿಸಿಕೊಂಡಿರುವುದು ಅವನ ಬಗ್ಗೆ ಅವಳಿಗಿದ್ದ ಪ್ರೀತಿಗೆ ಸಾಕ್ಷಿಯಾಗಿದೆ. ಈ ಟಾಟೂವಿನ ಫೋಟೋವನ್ನು ಸಹ ಆಕೆ ಅವನಿಗೆ ಎರಡು ಬಾರಿ ಈಮೇಲ್ ಮಾಡಿದ್ದಾಳೆ. ಸಂಬಂಧ ಮುಂದುವರಿಸಲು ನಿರಾಕರಿಸಿದಾಗ, ಆರೋಪಿಯ ಮೇಲೆ ಸುಳ್ಳು ಕೇಸು ಹಾಕಿದ್ದಾಳೆ ಎಂದು ವಾದಿಸಿದ್ದರು.
2020ರ ಜೂನ್ ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಜಾಮೀನು ನೀಡಿದ ನ್ಯಾಯಮೂರ್ತಿ ರಜನೀಶ್ ಭಟ್ನಾಗರ್, “ಟಾಟೂ ಮಾಡುವುದಕ್ಕೆ ವಿಶೇಷ ಯಂತ್ರಗಳ ಅಗತ್ಯವಿರುತ್ತದೆ ಮತ್ತು ಈ ರೀತಿಯ ಟಾಟೂವನ್ನು ಮಹಿಳೆಯ ವಿರೋಧ ಎದುರಿಸಿ ಮಾಡಲು ಸಾಧ್ಯ ಅನಿಸುತ್ತಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯು ಮೂರು ವರ್ಷ ದೂರು ನೀಡದೆ ಸುಮ್ಮನಿದ್ದಳು. ಆರೋಪಿಯು ಕೂಡಿಟ್ಟಿದ್ದ ಎನ್ನಲಾದ ಮನೆಯನ್ನು ಆಕೆಯೇ ಬಾಡಿಗೆಗೆ ಪಡೆದು ಒಬ್ಬಳೇ ವಾಸಿಸುತ್ತಿದ್ದಳು ಎಂದು ಪೊಲೀಸರ ವರದಿ ತಿಳಿಸುತ್ತದೆ ಎಂಬುದನ್ನೂ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್)
ಮತ್ತಿಗಾಗಿ ಕೆಮ್ಮಿನ ಔಷಧ ಕುಡಿಯುತ್ತಿದ್ದ… ಅದಕ್ಕಾಗಿ ಬ್ಯಾಂಕ್ ಲೂಟಿ ಮಾಡಿದ !
“ಎಲ್ಲೆಂದರಲ್ಲಿ ಯಾವಾಗ ಬೇಕಿದ್ದರೂ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ” : ಸುಪ್ರೀಂ ಕೋರ್ಟ್