ಕಾರಿಗಾಗಿ ಚಾಲಕನ ಕೊಂದವರ ಬಂಧನ

ನೆಲಮಂಗಲ: ಇನ್ನೊವಾ ಕಾರು ಅಪಹರಿಸಲು ಕಾರಿನ ಚಾಲಕನನ್ನೇ ಕೊಂದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ವಾಜರಹಳ್ಳಿ ವಿನೋದ್​ಕುಮಾರ್ (24) ಮತ್ತು ಮಂಡ್ಯ ಜಿಲ್ಲೆ ಪಾಂಡವಪುರ ನಿವಾಸಿ ಹೇಮಂತ್​ಸಾಗರ್ (23) ಬಂಧಿತರು. ಆರೋಪಿಗಳು ಮತ್ತು ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಬ್​ಇನ್​ಸ್ಪೆಕ್ಟರ್ ನವೀನ್​ಕುಮಾರ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದ ಕೆಂಪೇಗೌಡ (38) ಕಾರು ಖರೀದಿಸಿ, ಬಾಡಿಗೆಗೆ ಓಡಿಸುತ್ತಿದ್ದರು. ಮೇ 18 ರಂದು ಪ್ರವಾಸದ ನೆಪದಲ್ಲಿ ಕಾರು ಬಾಡಿಗೆ ಪಡೆದ ಆರೋಪಿಗಳು ನಗರ ಹೊರವಲಯದಲ್ಲಿ ಕೆಂಪೇಗೌಡ ಅವರ ಕುತ್ತಿಗೆಗೆ ವೈರಿನಿಂದ ಬಿಗಿದು ಕೊಲೆ ಮಾಡಿ, ನೀಲಗಿರಿ ತೋಪಿನಲ್ಲಿ ಮೃತದೇಹ ಸುಟ್ಟು ಪರಾರಿಯಾಗಿದ್ದರು.

ಸೋಮವಾರ ರಾತ್ರಿ ಬೆಂಗಳೂರು ಉತ್ತರ ತಾಲೂಕು ಸೊಂಡೆಕೊಪ್ಪದ ಮಾರ್ಗದಿಂದ ನೆಲಮಂಗಲ ಕಡೆಗೆ ಆರೋಪಿಗಳು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಗಣೇಶನ ಗುಡಿ ಬಳಿ ಕಾದು ಕುಳಿತಿದ್ದರು. ಬುಲೆಟ್​ನಲ್ಲಿ ಬರುತ್ತಿದ್ದ ಆರೋಪಿಗಳನ್ನು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಎಸ್​ಐ ನವೀನ್​ಕುಮಾರ್ ಹಿಂಬಾಲಿಸಿ ಆರೋಪಿ ಹೇಮಂತ್​ನನ್ನು ಹಿಡಿಯಲು ಹೋದಾಗ ಡ್ಯಾಗರ್​ನಿಂದ ಹಲ್ಲೆ ಮಾಡಿದ್ದಾನೆ. ಕೂಡಲೇ ಅನಿಲ್​ಕುಮಾರ್

ಮೂರು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದರು. ಮತ್ತೆ ಮೇಲೆ ಹಲ್ಲೆ ಮಾಡಲು ಮುಂದಾದಾಗ ಇಬ್ಬರ ಕಾಲುಗಳಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ.

ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮ್​ವಾಸ್ ಸೆಪಟ್ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಜ್ಜಿತ್, ಡಿವೈಎಸ್​ಪಿ ಪಾಂಡುರಂಗ, ಇನ್​ಸ್ಪೆಕ್ಟರ್ ಅನಿಲ್​ಕುಮಾರ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಎಸ್​ಐ ನವೀನ್​ಕುಮಾರ್ ಆರೋಗ್ಯ ವಿಚಾರಿಸಿದರು.

ಅಪರಾಧ ಹಿನ್ನೆಲೆ: ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳವು ಮಾಡುತ್ತಿದ್ದ ವಿನೋದ್ ಮತ್ತು ಚನ್ನಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಕಾರು ಕದ್ದಿದ್ದ ಹೇಮಂತ್ ಜೈಲು ಸೇರಿದ್ದರು. ಈ ವೇಳೆ ಇಬ್ಬರೂ ಪರಸ್ಪರ ಪರಿಚಯವಾಗಿದ್ದರು. 3 ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದರು. ಆರೋಪಿ ಹೇಮಂತ್ ಕದ್ದ ವಾಹನಗಳ ಬಣ್ಣ ಬದಲಿಸಿ ಆಂಧ್ರ ಮತ್ತು ಮುಂಬೈಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬಡಕುಟುಂಬದಿಂದ ಬಂದಿದ್ದ ಮೃತ ಕೆಂಪೇಗೌಡ ಬ್ಯಾಂಕಿನಲ್ಲಿ ಸಾಲಮಾಡಿ ಕಾರು ಖರೀದಿಸಿದ್ದರು. ಪಾಲಕರು, ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮತ್ತು 7 ತಿಂಗಳ ಗಂಡುಮಗು ಜತೆ ಬೆಂಗಳೂರಿನ ಹೆಬ್ಬಗೋಡಿಯಲ್ಲಿ ವಾಸವಿದ್ದರು.

ಅರೆಬೆಂದ ಸ್ಥಿತಿಯಲ್ಲಿ ಸಿಕ್ಕಿತ್ತು ಶವ

ತಾಲೂಕಿನ ಮಲ್ಲರಬಾಣವಾಡಿಯ ಗುಂಡುತೋಪಿನಲ್ಲಿ ಭಾನುವಾರ (ಮೇ 19) ಅರೆ ಬೆಂದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆಂಗಳೂರು ನಗರ ವ್ಯಾಪ್ತಿಯ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು. ಬೆಂಗಳೂರು ಹೆಬ್ಬಗೋಡಿ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಇನ್​ಸ್ಪೆಕ್ಟರ್ ಅನಿಲ್​ಕುಮಾರ್, ಎಸ್​ಐ ನವೀನ್​ಕುಮಾರ್, ಶಂಕರ್​ನಾಯಕ್ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಕಾಣೆಯಾದ ವ್ಯಕ್ತಿಯ ಮೊಬೈಲ್ ಕರೆಯನ್ನಾಧರಿಸಿ ಆರೋಪಿಗಳ ಶೋಧ ಆರಂಭಿಸಲಾಗಿತ್ತು. ಸುಟ್ಟ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವ ಹೆಬ್ಬಗೋಡಿ ಠಾಣೆಯಲ್ಲಿ ಕಾಣೆಯಾಗಿದ್ದ ಕೆಂಪೇಗೌಡ ಅವರದ್ದೇ ಎಂದು ದೃಢಪಟ್ಟಿತ್ತು.

Leave a Reply

Your email address will not be published. Required fields are marked *