ಬೆಂಗಳೂರು: ಸಾಲ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹನುಮಂತನಗರ ನಿವಾಸಿಯಾದ ಕ್ಯಾಚ್ ಚಾಲಕ ರಾಜು(೪೬) ಬಂಧಿತ. ಆರೋಪಿಯು ಏ.೧೨ ರಂದು ಮಹಿಳೆಯನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಸಂಬಂಧ ಮಹಿಳೆ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ರಾಜು ಹಾಗೂ ದೂರುದಾರೆ ಮಹಿಳೆ ಅಕ್ಕ-ಪಕ್ಕದ ಮನೆಯ ನಿವಾಸಿಗಳಾಗಿದ್ದು, ಇಬ್ಬರ ನಡುವೆ ತುಂಬಾ ಆಪ್ತತೆ ಇತ್ತು. ಹೀಗಾಗಿ ಮಹಿಳೆ ರಾಜು ೫ ಲಕ್ಷ ರೂ.ಅನ್ನು ಸಾಲವಾಗಿ ನೀಡಿದ್ದಳು. ಈ ಇಬ್ಬರು ಏ.೧೨ ರಂದು ಕೆಂಗೇರಿಯ ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಈ ವೇಳೆ ಮಹಿಳೆ ೫ ಲಕ್ಷ ರೂ. ಹಣ ನೀಡುವಂತೆ ಆರೋಪಿಯನ್ನು ಕೇಳಿದ್ದು, ಈ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದಾಗ ಆರೋಪಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ದೂರು ನೀಡಿದ್ದರು. ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
