ಐಸಿಸಿಯ ಈ ನಿಯಮದ ಪ್ರಕಾರ ವಿಶ್ವಕಪ್​ ಫೈನಲ್​ ಗೆಲುವು ನ್ಯೂಜಿಲೆಂಡ್​ ಪಾಲಾಗಾಬೇಕಿತ್ತು: ಏನದು ನಿಯಮ?

ನವದೆಹಲಿ: ಪ್ರತಿಷ್ಠಿತ ವಿಶ್ವಕಪ್​ ಟೂರ್ನಿಯಲ್ಲಿ ಕೊನೆಗೂ ಕ್ರಿಕೆಟ್​ ಜನಕ ಇಂಗ್ಲೆಂಡ್​ ಚೊಚ್ಚಲ ಬಾರಿಗೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು. ಈ ಬಾರಿಯೂ ಫೈನಲ್​ ತಲುಪಿದ ನ್ಯೂಜಿಲೆಂಡ್​ಗೆ ಅದೃಷ್ಟ ಮತ್ತೆ ಕೈಕೊಟ್ಟಿತು. ನಿನ್ನೆ ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ನಡೆದ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಸಾಕಷ್ಟು ತಿರುವುಗಳ ನಡುವೆಯೂ ಐಸಿಸಿ ನಿಯಮದ ಪ್ರಕಾರ ಇಂಗ್ಲೆಂಡ್​ ಗೆದ್ದರೆ, ಅದೇ ಐಸಿಸಿಯ ಈ ನಿಯಮದ ಪ್ರಕಾರ ನ್ಯೂಜಿಲೆಂಡ್​ ಗೆಲ್ಲ​ಬೇಕಾಗಿತ್ತು ಎಂದು ಹೇಳಲಾಗುತ್ತಿದೆ.

ಫೈನಲ್​ನಲ್ಲಿ ಐಸಿಸಿ ನಿಯಮ ಪುಸ್ತಕವನ್ನು ಅನುಸರಿಸುವುದೇ ಆದರೆ, ಅಂಪೈರ್​ ಮಾಡಿದ ಒಂದೇ ಒಂದು ತಪ್ಪಿನಿಂದ ನ್ಯೂಜಿಲೆಂಡ್​ ಪಡೆ ವಿಶ್ವಕಪ್​ ಟ್ರೋಫಿಯಿಂದ ವಂಚಿತವಾಗಿದೆ ಎಂದು ಹೇಳಲಾಗುತ್ತಿದೆ.


ಲೆಕ್ಕಗಳ ಪ್ರಕಾರ ನ್ಯೂಜಿಲೆಂಡ್​ ನೀಡಿದ 242 ರನ್​ ಗುರಿಯನ್ನು ಬೆನ್ನತ್ತಿದ ಇಂಗ್ಲೆಡ್​ ಗೆಲುವಿಗೆ ಕೊನೆಯಲ್ಲಿ 3 ಬಾಲ್​ಗೆ 9 ರನ್​ ಬೇಕಾಗಿತ್ತು. ಈ ವೇಳೆ ಸ್ಟ್ರೈಕರ್​ ಭಾಗದಲ್ಲಿದ್ದ ಬೆನ್​ ಸ್ಟೋಕ್ಸ್​ ಮಿಡ್​ವಿಕೆಟ್​ ವಿಭಾಗದಲ್ಲಿ ಬಲವಾಗಿ ಹೊಡೆಯಲು ಆದಿಲ್​ ರಶೀದ್​ ಜತೆ ಎರಡು ರನ್​ ಕದಿಯಲು ಯತ್ನಿಸಿ, ಸಫಲವಾಗುತ್ತಾರೆ. ಇದೇ ವೇಳೆ ಕ್ಷೇತ್ರ ರಕ್ಷಣೆ ಮಾಡಿದ ಕಿವೀಸ್ ಆಟಗಾರ ಓವರ್​ ಥ್ರೋ ಮಾಡಿದಾಗ ಸ್ಟೋಕ್ಸ್​ ಬ್ಯಾಟ್​ಗೆ ತಾಗಿದ ಚೆಂಡು ಬೌಂಡರಿ ಗೆರೆಯನ್ನು ಮುಟ್ಟುತ್ತದೆ. ಅಪೈರ್ಸ್​ ನಡುವಿನ ಚರ್ಚೆಯ ಬಳಿಕ ಇದನ್ನು ಬೌಂಡರಿ ಎಂದು ಪರಿಗಣಿಸಿ ಎರಡು ರನ್​ ಜತೆ ಬೌಂಡರಿ ಸೇರಿಸಿ 6 ರನ್​ ಎಂದು ಪರಿಗಣಿಸಲಾಗುತ್ತದೆ. ಇದು ಇಂಗ್ಲೆಂಡ್​ ಪಾಲಿಗೆ ಮ್ಯಾಚ್​ ಟರ್ನಿಂಗ್​ ಪಾಯಿಂಟ್​ ಆಗುತ್ತದೆ. ಕೊನೆಲಯಲ್ಲಿ ಆಂಗ್ಲ ಪಡೆಗೆ ಕೇವಲ 2 ಬಾಲ್​ಗೆ 3 ರನ್​ ಬೇಕಾಗಿರುತ್ತದೆ.

ಆದರೆ, ಐಸಿಸಿಯ 19.8 ಕಾನೂನಿನ ಪ್ರಕಾರ ಕ್ಷೇತ್ರ ರಕ್ಷಕನೊಬ್ಬ ಉದ್ದೇಶಪೂರ್ವಕವಾಗಿ ಓವರ್​ ಥ್ರೋ ಮಾಡಿದಾಗ ಸಂಫೂರ್ಣಗೊಳಿಸದ ರನ್​ ಅನ್ನು ಗಣನೆಗೆ ತೆಗೆದುಕೊಳ್ಳುವಂತಿಲ್ಲ. ನಿನ್ನೆ ನಡೆದ ಪಂದ್ಯದಲ್ಲಿ ಬೆನ್​ ಸ್ಟೋಕ್ಸ್​ ಹಾಗೂ ಆದಿಲ್​ ರಶೀದ್​ ಮೊದಲ ರನ್​ ಪೂರ್ಣಗೊಳಿಸಿ ಎರಡನೇ ರನ್​ ಕದಿಯುವಾಗ ಮಾರ್ಟಿನ್​ ಗುಪ್ಟಿಲ್​ ಎಸೆದ ಓವರ್​ ಥ್ರೋ ಸ್ಟೋಕ್ಸ್​ ಬ್ಯಾಟ್​ಗೆ ತಾಗಿ ಬೌಂಡರಿ ಗೆರೆ ಮುಟ್ಟಿತ್ತು. ಈ ವೇಳೆ ಎರಡನೇ ರನ್​​ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಐಸಿಸಿ ನಿಯಮ ಅನುಸರಿಸಿದ್ದರೆ, ಇಂಗ್ಲೆಂಡ್​ಗೆ 6 ರನ್​ ಬದಲಾಗಿ 5 ರನ್​ ಮಾತ್ರ ಕೊಡಲಾಗುತ್ತಿತ್ತು. ಈ ರೀತಿ ಆಗಿದ್ದರೆ, ವಿಜಯೋತ್ಸವ ನ್ಯೂಜಿಲೆಂಡ್​ ಪಾಲಾಗುತ್ತಿತ್ತು.

ನಿನ್ನೆ ಲಾರ್ಡ್​ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಕೇನ್​ ವಿಲಿಯಮ್ಸನ್​ ಪಡೆ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 241 ರನ್​ ಕಲೆಹಾಕುವ ಮೂಲಕ ಇಯಾನ್​ ಮಾರ್ಗನ್​ ಪಡೆ ಗೆಲುವಿಗೆ 242 ರನ್​ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆಂಗ್ಲ ಪಡೆ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 241 ರನ್​ ಕಲೆಹಾಕಿತು. ಈ ಮೂಲಕ ಪಂದ್ಯವು ಟೈನಲ್ಲಿ ಅಂತ್ಯವಾಯಿತು. ಬಳಿಕ ನಡೆದ ಸೂಪರ್​ ಓವರ್​ನಲ್ಲಿ ಮೊದಲ ಬ್ಯಾಟ್​ ಮಾಡಿದ ಆಂಗ್ಲ ಪಡೆ ಯಾವುದೇ ವಿಕೆಟ್​ ನಷ್ಟವಿಲ್ಲದೇ 16 ರನ್​ಗಳ ಗುರಿ ನೀಡಿತ್ತು. ಬೆನ್ನತ್ತಿದ ಕಿವೀಸ್​ ಪಡೆಯೂ ಕೂಡ 15 ರನ್​ ಗಳಿಸುವ ಮೂಲಕ ಮತ್ತೊಮ್ಮೆ ಟೈ ಆಯಿತು. ಆದರೆ, ಐಸಿಸಿ ನಿಯಮದ ಪ್ರಕಾರ ಆಂಗ್ಲ ಪಡೆ 2 ಬೌಂಡರಿ ಹೊಡೆದಿದ್ದರಿಂದ ಆಂಗ್ಲ ಪಡೆಗೆ ಗೆಲುವು ಎಂದು ಘೋಷಿಸಲಾಯಿತು. (ಏಜೆನ್ಸೀಸ್​)