ವಚನ ಸಾಹಿತ್ಯದಲ್ಲಿ ಮೌಲ್ಯಗಳ ಗಟ್ಟಿತನ

ಶನಿವಾರಸಂತೆ: ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳ ಗಟ್ಟಿತನವಿದ್ದು, 12ನೇ ಶತಮಾನ ಸಮಾನತೆಯ ಜಾಗೃತಿಗೆ ನಾಂದಿಯಾಯಿತು ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.


ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಕದಳಿ ಮಹಿಳಾ ವೇದಿಕೆ, ಕಿರಿಕೊಡ್ಲಿ ಮಠದ ಶ್ರೀ ಗುರುಸಿದ್ದಸ್ವಾಮಿ ವಿದ್ಯಾಪೀಠ ಹಾಗೂ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ವಿದ್ಯಾಸಂಸ್ಥೆಯ ಭದ್ರಮ್ಮ ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ವರ್ತಮಾನಕ್ಕೂ ವಚನ’ ಚಿಂತನಾಗೋಷ್ಠಿಯ ಸಮಾರೋಪ, ವಚನ ಸಂಗಮ ಮತ್ತು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.


ಜಾತೀಯತೆ, ಅಸಮಾನತೆ ಮುಂತಾದ ಸಾಮಾಜಿಕ ಮೌಢ್ಯಗಳನ್ನು ಹೋಗಲಾಡಿಸಲು ವಚನಗಳು ನಾಂದಿಯಾದವು. ಶರಣರ ಅನುಭವದ ಮಾತುಗಳು ವಚನ ಭಂಡಾರವಾಗಿ ರೂಪಾಂತರಗೊಂಡವು ಎಂದರು.
ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳು ಕಳೆದುಹೋಗುತ್ತಿರುವ ಈಗಿನ ದಿನಗಳಲ್ಲಿ ಶರಣರು ಮತ್ತು ವಚನ ಸಾಹಿತ್ಯದ ಬಗ್ಗೆ ಚಿಂತನಾ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜನೆ ಆಗಬೇಕು. ಆ ಮೂಲಕ ಎಲ್ಲರಲ್ಲೂ ಸಾಮಾಜಿಕ ಮೌಲ್ಯಗಳು ಕರಗತವಾದಲ್ಲಿ ಸಮಾಜ ಸಂಸ್ಕಾರಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.


ಹೈಕೋರ್ಟ್ ಅಭಿಯೋಜಕ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ಶರಣ-ಶರಣೆಯರು ಹಾಗೂ ವಚನ ಸಾಹಿತ್ಯದ ಬಗ್ಗೆ ಯುವ ಜನಾಂಗಕ್ಕೆಅರಿವು ಮೂಡಿಸುವ ಕಾರ್ಯಗಳು ಹೆಚ್ಚಾಗಬೇಕಾಗಿದೆ ಎಂದರು.
ಕೊಡ್ಲಿಪೇಟೆ ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ವೀರಾಜಪೇಟೆ ಸುರಭಿ ಪ್ರಸಾದ್ ಅವರ ‘ನೀರವತೆ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.


ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರಮುಖರಾದ ಕೆ.ವಿ.ಮಂಜುನಾಥ್, ಕೆ.ಎನ್.ಸಂದೀಪ್, ಜಿ.ಎಂ.ಕಾಂತರಾಜ್, ಹಾಲಪ್ಪ, ಲೇಖಕಿ ಸುರಭಿ ಪ್ರಸಾದ್, ಶ.ಗ. ನಯನತಾರಾ, ಪ್ರಕಾಶ್‌ಚಂದ್ರ ಮುಂತಾದವರು ಹಾಜರಿದ್ದರು.