ಕಾರ್ಗಲ್: ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಎಕರೆ ಆಶ್ರಯ ನಿವೇಶನಗಳಿಗೆ ಮೂಲ ಸೌಲಭ್ಯ ಒದಗಿಸಲಾಗುವುದು. ಇನ್ನೂ 9 ಎಕರೆ ರೆವಿನ್ಯೂ ಜಾಗ ಗುರುತಿಸಿ ಆಶ್ರಯ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕೆಪಿಸಿ ಕ್ಲಬ್ ಆವರಣದಲ್ಲಿ ಪಪಂ ಆಯೋಜಿಸಿದ್ದ ವಿವಿಧ ಸೌಲಭ್ಯಗಳಡಿ ಫಲಾನುಭವಿಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಯಾಣಿಕರಿಗೆ ಅನುಕೂಲವಾಗಲು ಕಾರ್ಗಲ್ ಪಟ್ಟಣಕ್ಕೆ ಬಸ್ ನಿಲ್ದಾಣದ ಅಗತ್ಯವಿದೆ. ಪಟ್ಟಣದ ಶ್ರೀ ಮಹಾಗಣಪತಿ ಉತ್ಸವ ಮಂಟಪದ ಜಾಗದಲ್ಲಿ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ಈಗಿರುವ ಉತ್ಸವ ಮಂಟಪಕ್ಕೆ ತೊಂದರೆಯಾಗದಂತೆ ಅರ್ಧ ಎಕರೆ ಜಾಗದಲ್ಲಿ ನಿರ್ಮಿಸಲು 83 ಲಕ್ಷ ರೂ. ಅನುದಾನ ಇದೆ. ಇನ್ನೂ ಹೆಚ್ಚುವರಿ 20 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಅಭಿವೃದ್ಧಿ ದೃಷ್ಟಿಯಿಂದ ಪಪಂ ವ್ಯಾಪ್ತಿಯ ಹನ್ನೊಂದು ವಾರ್ಡ್‌ಗಳನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ. ವಿಶ್ವವಿಖ್ಯಾತ ಜೋಗ ಫಾಲ್ಸ್ ಒಳಗೊಂಡಿರುವ ಕಾರ್ಗಲ್ ಪ್ರದೇಶವನ್ನು ಸುಂದರವಾಗಿಸಲು ಭಟ್ಕಳ ವೃತ್ತದಿಂದ ಮಹಾವೀರ ವೃತ್ತದವರೆಗೆ ಪ್ರಮುಖ ಬೀದಿಯನ್ನು ದ್ವಿಪಥ ಮಾಡಿ ದೀಪ ಅಳವಡಿಸಲು ಚಿಂತಿಸಲಾಗಿದೆ. ಜೋಗ-ಕಾರ್ಗಲ್ ವ್ಯಾಪ್ತಿಯಲ್ಲಿ ನೂತನ ಮೀನು ಮಾರುಕಟ್ಟೆ ನಿರ್ಮಿಸಲಾಗುವುದು ಎಂದರು.
ಜನರ ಬದುಕಿಗೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಪೂರಕವಾಗಿವೆ. ಸರ್ಕಾರ ಹೊಸದಾಗಿ 4,600 ಬಸ್ ನೀಡಿದೆ. ತಾಲೂಕಿಗೆ 12 ಬಸ್ ನೀಡಿದ್ದು, ಅವಶ್ಯವಿರುವ ಕಡೆಗಳಲ್ಲಿ ಬಸ್ ಸೌಲಭ್ಯ ಒದಗಿಸಲಾಗುವುದು. ಸಾಗರ-ಮಣಿಪಾಲ್, ಜೋಗ-ಕಾರ್ಗಲ್ ಮಾರ್ಗಕ್ಕೆ 2 ಬಸ್ ನೀಡಲಾಗುವುದು.
ಗೋಪಾಲಕೃಷ್ಣ ಬೇಳೂರು
ಸಾಗರ ಶಾಸಕ
ಪಪಂ ಅಧ್ಯಕ್ಷ ಎಂ.ರಾಜು ಮಾತನಾಡಿ, ಪಪಂ ನಡಿಗೆ ವಾರ್ಡ್ ಕಡೆಗೆ ಅಭಿಯಾನ ಆರಂಭಿಸಿ ಎಲ್ಲ ವಾರ್ಡ್‌ಗಳಲ್ಲಿ ಕುಂದು ಕೊರತೆ ಸಭೆ ನಡೆಸಲಾಗುವುದು. ಎಸ್‌ಎಫ್‌ಸಿ ಅನುದಾನದಡಿ ಪಪಂ ವ್ಯಾಪ್ತಿಯಲ್ಲಿ 2.60 ಲಕ್ಷ ರೂ. ವೆಚ್ಚದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಒಟ್ಟು 35 ಹೊಲಿಗೆ ಯಂತ್ರ ಮೀಸಲಿರಿಸಲಾಗಿದೆ ಎಂದು ಹೇಳಿದರು.
ಕಾಲೇಜು ವಿದ್ಯಾರ್ಥಿಗಳಿಗೆ 1.37 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ವೈದ್ಯಕೀಯ ವೆಚ್ಚಕ್ಕಾಗಿ 2.61 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಶೇ. 5ರ ಅನುದಾನದಡಿ ಅಂಗವಿಕಲರಿಗೆ ವಿವಿಧ ಸಾಮಗ್ರಿ ವಿತರಣೆಗೆ 1.32 ಲಕ್ಷ ರೂ. ಹಣ ಮೀಸಲಿರಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅನುದಾನದಡಿ ಎರಡು ಆಟೋ ಟಿಪ್ಪರ್ ಉಪಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಪಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಲಕ್ಷ್ಮಣ್, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀರಾಜು, ಸದಸ್ಯರಾದ ಪಿ.ಮಂಜುನಾಥ್, ಸುಜಾತಾ ಜೈನ್, ನಾಗರಾಜ್ ವಾಟೆಮಕ್ಕಿ, ವಾಸಂತಿ ರಮೇಶ್, ಲಲಿತಾ ಮಂಜುನಾಥ್, ಉಮೇಶ್ ಕೆಮ್ಮಣಗಾರ್, ಕೆ.ಸಿ.ಹರೀಶ್, ಬಾಲಸುಬ್ರಹ್ಮಣ್ಯ, ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಪ್ರಮುಖರಾದ ರವಿ ಲಿಂಗನಮಕ್ಕಿ, ಗಣಪತಿ ಮಂಡಗಳಲೆ ಇತರರಿದ್ದರು.