ಹೆದ್ದಾರಿಯಲ್ಲಿ ಅಪಘಾತ ಹೆಚ್ಚಳಕ್ಕೆ ಕಳವಳ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತ ಸಂಖ್ಯೆ ಹೆಚ್ಚುತ್ತಿದ್ದು, ಗುತ್ತಿಗೆ ನಿರ್ವಹಿಸಿದ ಸಂಸ್ಥೆ, ಹೆದ್ದಾರಿ ಇಲಾಖೆ ಇಂಜಿನಿಯರ್‌ಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವ ಬಗ್ಗೆ 16ನೇ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಪಂ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೆದ್ದಾರಿ ಸಮಸ್ಯೆ ವಿಷಯ ಪ್ರಸ್ತಾಪಿಸಿದರು. ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ದಿನಕ್ಕೊಂದು ಹೆಣ ಬೀಳುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಗುತ್ತಿಗೆ ಸಂಸ್ಥೆ ಮತ್ತು ಇಲಾಖೆ ಇಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಟಪಾಡಿ, ಉಪ್ಪೂರು, ಅರೆ ಶಿರೂರುಗಳಲ್ಲಿ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ, ಅಪಘಾತ ವಲಯಗಳ ಬಗ್ಗೆ ಸದಸ್ಯರಾದ ಮಾರಾಳಿ ಪ್ರತಾಪ್ ಹೆಗ್ಡೆ, ಜನಾರ್ದನ ತೋನ್ಸೆ, ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಸರಿಯಾಗಿ ನೀರು ಹರಿಯುವುದಿಲ್ಲ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿ ವಿಭಜಕಗಳ ಮಧ್ಯೆ ಮಳೆ ನೀರು ಹರಿಯಲು ಮಾಡಿರುವ ವ್ಯವಸ್ಥೆ ಮುಚ್ಚಿ, ಇಲ್ಲವೇ ಸಂಖ್ಯೆ ಕಡಿಮೆ ಮಾಡಿ. ಅದರಲ್ಲೇ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಸಂಚರಿಸುವುದರಿಂದ ಅಪಘಾತ ಹೆಚ್ಚುತ್ತಿದೆ ಎಂದು ಕೋಟ ಸಲಹೆ ನೀಡಿದರು.

ಎರಡು ತಂಡಗಳು ಸನ್ನದ್ಧ: ಜಿಲ್ಲೆಯಲ್ಲಿ ಹೆದ್ದಾರಿ ಮೇಲೆ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾದಲ್ಲಿ ತೆರವು ಮಾಡಲು ಎರಡು ತಂಡಗಳು ಸನ್ನದ್ಧವಾಗಿವೆ ಎಂದು ಹೆದ್ದಾರಿ ಪ್ರಾಧಿಕಾರ ಇಂಜಿನಿಯರ್ ನವೀನ್ ಮಾಹಿತಿ ನೀಡಿದರು. ಹೆದ್ದಾರಿ ಸಂಬಂಧಪಟ್ಟ ಎಲ್ಲ ಗ್ರಾ.ಪಂ. ಮತ್ತು ಸ್ಥಳೀಯಾಡಳಿತ ಸಂಸ್ಥೆಯೊಂದಿಗೆ ಈ ತಂಡಗಳು ಸಂಪರ್ಕದಲ್ಲಿವೆ ಎಂದರು.

ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶನದಲ್ಲೇ ಹೆದ್ದಾರಿ ಕಾಮಗಾರಿ ನಿರ್ವಹಿಸಲಾಗಿದೆ. ಮಳೆ ನೀರು ಹರಿಯಲು ವಿಭಜಕ ಮಧ್ಯೆ ಮಾಡಿರುವ ವ್ಯವಸ್ಥೆ ಸರಿ ಮಾಡಲಾಗುವುದು. ಜಿ.ಪಂ. ಸದಸ್ಯರ ಸೂಚನೆಯಂತೆ ಅಪಘಾತ ವಲಯ, ಮಳೆಯಿಂದ ಆಗುವ ಸಮಸ್ಯೆಗಳ ಸ್ಥಳಗಳನ್ನು ಪರಿಶೀಲಿಸಿ ತುರ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ, ಉದಯ ಎಸ್.ಕೋಟ್ಯಾನ್, ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿ.ಪಂ ಸಿಇಒ ಸಿಂಧೂ ಬಿ.ರೂಪೇಶ್, ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

15 ದಿನದೊಳಗೆ ಪಡಿತರ ಚೀಟಿ ವಿತರಣೆ
ಪಡಿತರ ಚೀಟಿಗೆ 6706 ಅರ್ಜಿ ಸ್ವೀಕೃತವಾಗಿದ್ದು, 3089 ಅರ್ಜಿ ಬಾಕಿ ಇದೆ ಎಂದು ಆಹಾರ ಇಲಾಖೆ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದರು. ಚುನಾವಣೆ ಮುಗಿದು ಒಂದು ತಿಂಗಳು ಕಳೆದರೂ ಪಡಿತರ ಚೀಟಿ ವಿತರಣೆಗೆ ವಿಳಂಬ ಮಾಡುತ್ತಿರುವ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು. ಬಾಕಿ ಅರ್ಜಿಗಳನ್ನು 15 ದಿನದೊಳಗೆ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Leave a Reply

Your email address will not be published. Required fields are marked *