ವಿಐಪಿಗಳಿಗೆ ‘ಗುಜರಿ’ ಸ್ವಾಗತ!

< ಸರ್ಕಿಟ್ ಹೌಸ್ ಮುಂಭಾಗ ಅಪಘಾತಕ್ಕೀಡಾದ ವಾಹನಗಳ ರಾಶಿ>

ಮಂಗಳೂರು: ಪ್ರಧಾನಿ, ರಾಷ್ಟ್ರಪತಿ ಸಹಿತ ವಿಐಪಿಗಳು ಮಂಗಳೂರಿನಲ್ಲಿ ತಂಗುವ ಸರ್ಕಿಟ್ ಹೌಸ್ ಸುತ್ತ ಗುಜರಿ ವಾಹನಗಳದ್ದೇ ಕಾರುಬಾರು!

ಕದ್ರಿ ಠಾಣೆ ಪಕ್ಕದ ಸರ್ಕಿಟ್ ಹೌಸ್ ಮುಂದೆ ರಾಶಿ, ರಾಶಿ ಗುಜರಿ ವಾಹನಗಳು, ಅಪಘಾತದಿಂದ ನಜ್ಜುಗುಜ್ಜಾಗಿರುವ ಕಾರು, ಬೈಕ್‌ಗಳು, ರಿಕ್ಷಾ, ತುಕ್ಕು ಹಿಡಿಯುತ್ತಿರುವ ಹಳೇ ಬಸ್ ಆ ಪರಿಸರದ ಅಂದ ಕೆಡಿಸುತ್ತಿದೆ.

ಹಲವು ವರ್ಷಗಳಿಂದ ಕದ್ರಿ ಠಾಣೆ ಮುಂಭಾಗ ನಜ್ಜುಗುಜ್ಜಾದ ವಾಹನಗಳನ್ನು ನಿಲ್ಲಿಸಲಾಗಿದ್ದು, ಅಪಘಾತಕ್ಕೀಡಾದ ಈ ವಾಹನಗಳನ್ನು ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲದೆ ಇರುವುದರಿಂದ ರಸ್ತೆ ಬದಿಯಲ್ಲೇ ಇರಿಸಲಾಗಿದೆ. ನಗರಕ್ಕೆ ಆಗಮಿಸುವ ವಿಐಪಿಗಳನ್ನು ಸ್ವಾಗತಿಸುವುದು ಅಪಘಾತಕ್ಕೀಡಾದ ಹಳೇ ವಾಹನಗಳು.

ಸರ್ಕಿಟ್ ಹೌಸ್‌ಗೆ ನಿತ್ಯ ದೂರದೂರಿನ ಅತಿಥಿಗಳು, ರಾಜಕಾರಣಿಗಳು ಬರುತ್ತಾರೆ. ಕದ್ರಿ ರಸ್ತೆ ಏರ್‌ಪೋರ್ಟ್‌ಗೆ ಹೋಗುವ ಮುಖ್ಯರಸ್ತೆಯೂ ಆಗಿರುವುದರಿಂದ ವಿದೇಶದ ಗಣ್ಯರು ಕೂಡ ನಗರಕ್ಕೆ ಇಲ್ಲಿಂದಲೇ ಬರುತ್ತಾರೆ. ಈ ನಜ್ಜುಗುಜ್ಜಾದ ವಾಹನಗಳು ಮಂಗಳೂರಿಗೆ ಕಪ್ಪು ಚುಕ್ಕೆ ಎಂಬಂತಿದೆ. ಮಂಗಳೂರು ಸ್ಮಾರ್ಟ್ ಆಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವಾಗ ಈ ಗಲೀಜು ವಾಹನಗಳು ನಗರಕ್ಕೆ ಕೇಡಾಗಿದೆ.

ವಾಹನದ ಹಿಂದೆ ಶೌಚ: ಅಪಘಾತಕ್ಕೀಡಾದ ಲಾರಿ, ಬಸ್‌ಗಳ ಹಿಂದೆ ದಾರಿಹೋಕರು ಶೌಚ ಮಾಡುತ್ತಿದ್ದು ಫುಟ್‌ಪಾತ್ ಕೂಡ ಗಲೀಜಾಗಿದೆ. ಆಕಾಶವಾಣಿ ಮಂಗಳೂರಿನ ಕಾಂಪೌಂಡ್‌ಗೆ ತಾಗಿಕೊಂಡಿರುವ ಫುಟ್‌ಪಾತ್‌ನಲ್ಲೇ ಕೆಲವರು ಗಲೀಜು ಮಾಡುತ್ತಾರೆ. ಇಲ್ಲಿಂದ ನಡೆದುಕೊಂಡು ಹೋಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನಿತ್ಯ ಮುಜುಗರದ ವಾತಾವರಣ. ಇದನ್ನು ಕಂಡೂ ಕಾಣದಂತಿದೆ ಮಹಾನಗರ ಪಾಲಿಕೆ ಆಡಳಿತ.

ಪ್ರವಾಸಿ ತಾಣಕ್ಕೆ ಕೇಡು: ಸರ್ಕಿಟ್‌ಹೌಸ್ ಮುಂಭಾಗದಿಂದ ಪದುವಾ ತನಕ ಸಾಗುವ ರಸ್ತೆಯಲ್ಲಿ ನಿತ್ಯ ಪ್ರವಾಸಿಗರು ಇರುತ್ತಾರೆ. ಕದ್ರಿ ಪಾರ್ಕ್‌ಗೆ ವಿಹಾರಕ್ಕೆ ಬಂದವರು, ಸಂಗೀತ ಕಾರಂಜಿ ವೀಕ್ಷಣೆಗೆ ಬಂದವರು ಇಲ್ಲಿ ಅಡ್ಡಾಡುತ್ತಾರೆ. ಕದ್ರಿ ಪಾರ್ಕ್‌ನಲ್ಲಿ ಆಗಾಗ ಮೇಳ, ಪ್ರದರ್ಶನಗಳು ನಡೆಯುತ್ತವೆ. ಇಂಥ ಪ್ರವಾಸಿ ತಾಣಕ್ಕೆ ಅಪಘಾತಕ್ಕೀಡಾದ ವಾಹನಗಳ ರಾಶಿ ಕೇಡಾಗಿ ಪರಿಣಮಿಸಿದೆ. ಜತೆಗೆ ಮಲ ಮೂತ್ರಗಳ ವಾಸನೆ ಬೇರೆ!

ಗಾಂಜಾ ಅಡ್ಡೆ: ಕದ್ರಿಯಲ್ಲಿ ಅಪಘಾತಕ್ಕೀಡಾದ ವಾಹನಗಳೇ ಗಾಂಜಾ ಅಡ್ಡೆ. ಬಸ್‌ನ ಹಿಂದುಗಡೆ ನಿಂತು ಮರೆಯಲ್ಲಿ ಅವ್ಯವಹಾರ ನಡೆಸುತ್ತಾರೆ. ಪುಂಡುಪೋಕರಿಗಳು ಬಸ್‌ನೊಳಗೆ ಕೂತು ಮದ್ಯಪಾನ ಮಾಡುತ್ತಾರೆ. ದಿನಾ ಬೆಳಗ್ಗೆ ಇಲ್ಲಿ ಬಿದ್ದಿರುವ ಬಿಯರ್ ಬಾಟಲಿ, ತಿಂಡಿ, ನೀರಿನ ಬಾಟಲಿಗಳು ಸ್ಥಳದಲ್ಲಿ ನಡೆಯುವ ಅವ್ಯವಹಾರಕ್ಕೆ ಸಾಕ್ಷಿ.

ಹಲವಾರು ವಾಹನಗಳಿಗೆ ಸಂಬಂಧಿಸಿ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಕೋರ್ಟ್‌ನ ಒಪ್ಪಿಗೆ ಇಲ್ಲದೆ ವಿಲೇವಾರಿ ಮಾಡುವಂತಿಲ್ಲ. ಕೋರ್ಟ್ ಒಪ್ಪಿಗೆ ನೀಡಿದಾಕ್ಷಣ ವಾಹನಗಳನ್ನು ತೆರವು ಮಾಡುತ್ತೇವೆ. ಕೇಸುಗಳಿರುವ ವಾಹನಗಳನ್ನು ಇಡಲು ಜಾಗದ ಸಮಸ್ಯೆಯೂ ಇದೆ.
ಮಾರುತಿ ನಾಯಕ್
ಇನ್‌ಸ್ಪೆಕ್ಟರ್ ಕದ್ರಿ ಠಾಣೆ