ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಹೊತ್ತಿಕೊಂಡ ಬೆಂಕಿ: ಮನೆ ಭಸ್ಮ

ಶ್ರೀರಂಗಪಟ್ಟಣ: ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಹಲಗೆಗಳಿಗೆ ಬೆಂಕಿ ಹೊತ್ತಿಕೊಂಡು, ನಂತರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣವಾಗಿ ಭಸ್ಮವಾಗಿರುವ ದುರ್ಘಟನೆ ನಡೆದಿದೆ.

ಪಟ್ಟಣದ ರಂಗನಾಥನಗರದ ವೈದ್ಯ‌ ಡಾ.ಅರ್ಜುನ್ ಕುಮಾರ್ ಎಂಬುವರ ಮನೆಯಲ್ಲಿ ಮುಂಜಾನೆ 4.30ರಲ್ಲಿ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದ ಕೂಡಲೇ ಮನೆಯವರೆಲ್ಲ ಹೊರಬಂದು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯ ಜನರು ಎದ್ದುಬಂದು ಬೆಂಕಿ ಆರಿಸುವ ಪ್ರಯತ್ನದಲ್ಲಿದ್ದಾಗಲೇ ಸಿಲಿಂಡರ್​ ಕೂಡ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬೆಂಕಿಯ ಕೆನ್ನಾಲಗೆ ಕ್ಷಣಾರ್ಧದಲ್ಲೇ ಮನೆಯನ್ನು ಆವರಿಸಿದ್ದು, ಮನೆಯಲ್ಲಿದ್ದ ಎಲ್ಲ ಸಾಮಗ್ರಿಗಳೂ ಸುಟ್ಟುಹೋಗಿವೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸಾಕಷ್ಟು ಸಮಯವಾದರೂ ಬಾರದ ಹಿನ್ನೆಲೆಯಲ್ಲಿ ಕೆಲವರು ಸ್ಥಳಕ್ಕೆ ಹೋಗಿ ಕರೆತಂದಿದ್ದಾರೆ.

ನಂತರ ಬೆಂಕಿ ನಂದಿಸುವ ಕಾರ್ಯಚರಣೆಗೆ ಪಾಂಡವಪುರದಿಂದಲೂ ಅಗ್ನಿ ಶಾಮಕ ದಳ ಆಗಮಿಸಿದ್ದು, ಬೆಳಗ್ಗೆ 6.45ರ ತನಕ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.