More

    ಅಪಘಾತ ಕೇಂದ್ರ ಮಾವಿನಕಟ್ಟೆ ರಸ್ತೆ: ನಿರಂತರ ಸಾವುನೋವು ಹಂಪ್ಸ್ ಅಳವಡಿಸಲು ಒತ್ತಾಯ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್

    ಬೆಳ್ಮಣ್‌ನಿಂದ ಕಾರ್ಕಳ ಸಾಗುವ ರಾಜ್ಯ ಹೆದ್ದಾರಿ 1ರ ನಂದಳಿಕೆ ಮಾವಿನಕಟ್ಟೆಯಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರ ಅಪಘಾತಗಳು ನಡೆದು ಅನೇಕ ಸಾವುನೋವು ಸಂಭವಿಸಿದೆ ಆದರೆ ಅಪಘಾತ ತಡೆಗಟ್ಟಲು ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ.ಕೆದಿಂಜೆಯಿಂದ ಮಾವಿನಕಟ್ಟೆ ಸಮೀಪಿಸುತ್ತಿದ್ದಂತೆ ತಿರುವು ರಸ್ತೆಯಾಗಿದ್ದು ಬೆಳ್ಮಣ್ ಭಾಗದಿಂದ ವೇಗವಾಗಿ ಬರುವ ವಾಹನಗಳು ತೀರ ಬಲಭಾಗಕ್ಕೆ ಸರಿಯುವುದರಿಂದ ಅಪಘಾತ ಸಂಭವಿಸುತ್ತಿದೆ.

    ಈ ರಸ್ತೆ ಕೆಲ ವರ್ಷಗಳ ಹಿಂದೆ ಅಭಿವೃದ್ಧಿಹೊಂದಿ ಈಗ ಡಬ್ಬಲ್ ಲೈನ್ ಆಗಿದೆ. ಸಿಂಗಲ್ ಲೈನ್ ಇದ್ದಾಗಲೂ ಇಲ್ಲಿ ಅಪಘಾತಗಳು ಸಂಭವಿಸುತ್ತಿದ್ದವು, ಡಬ್ಬಲ್ ಲೈನ್ ಆದ ನಂತರವೂ ಅಪಘಾತಗಳು ಕಡಿಮೆಯಾಗಿಲ್ಲ. ತಿರುವಿನಲ್ಲಿ ವಾಹನಗಳ ವೇಗ ನಿಯಂತ್ರಿಸಲು ಸಾಧ್ಯವಾಗದಿರುವುದೇ ಅಪಘಾತಕ್ಕೆ ಮುಖ್ಯ ಕಾರಣ. ಮಾವಿನಕಟ್ಟೆಯ ರಸ್ತೆಯಲ್ಲಿ ವಾರಕ್ಕೆ ಒಂದೆರಡಾದರೂ ಅಪಘಾತ ತಪ್ಪಿದ್ದಲ್ಲ. ಕೆಲವೊಂದು ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದರೆ, ಹಲವು ವಾಹನಗಳು ರಸ್ತೆಯ ಬದಿಯ ಆಳವಾದ ಹೊಂಡಕ್ಕೆ ಬಿದ್ದು, ಮರಕ್ಕೆ ಹಾಗೂ ದಾರಿಹೋಕರಿಗೆ ಡಿಕ್ಕಿ ಹೊಡೆದು ಸಾವುನೋವು ಸಂಭವಿಸುತ್ತಿದೆ.ಹತ್ತು ವರ್ಷದಲ್ಲಿ ಒಂದೇ ಸ್ಥಳದಲ್ಲಿ 40ಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ.

    ಇತ್ತೀಚೆಗೆ ಕಾರೊಂದು ಹೊಂಡಕ್ಕೆ ಬಿದ್ದು ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿತ್ತು, ಬಳಿಕ ಮತ್ತೊಂದು ಕಾರು ರಸ್ತೆಯ ಬದಿಯಲ್ಲಿ ಹಾಕಿದ್ದ ಕಲ್ಲಿಗೆ ಡಿಕ್ಕಿ ಹೊಡೆದು ಜಖಂಗೊಂಡು ಪ್ರಯಾಣಿಕರು ಗಾಯಗೊಂಡಿದ್ದರು. ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೆಲ ವರ್ಷಗಳ ಹಿಂದೆ ಬೈಕ್ ಅಪಘಾತದಲ್ಲಿ ಬೆಳ್ಮಣ್ ನಿವಾಸಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಎಕ್ಸ್‌ಪ್ರೆಸ್ ಬಸ್ಸೊಂದು ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದು ಆಳವಾದ ಕಂದಕಕ್ಕೆ ಬಿದ್ದು ಇಬ್ಬರು ಮೃತರಾಗಿ ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದರು. ಕೆಲ ದಿನಗಳ ಹಿಂದೆ ಕಾರೊಂದು ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು.
    *ಅಣ್ಣ- ತಮ್ಮ ಸಾವು : ಜುಲೈ 10ರಂದು ಬೆಳ್ಮಣ್ ಕಡೆಯಿಂದ ಕಾರ್ಕಳದತ್ತ ಸಾಗುತ್ತಿದ್ದ ಇನ್ನೊವಾ ಕಾರು ಚಾಲಕನ ಅಜಾಗರೂಕತೆಯಿಂದ ಬಲ ಭಾಗಕ್ಕೆ ಸರಿದು ಹೋದ ಕಾರಣ ಎದುರಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು ಸ್ಕೂಟಿಯಲ್ಲಿದ್ದ ನಂದಳಿಕೆ ನಿವಾಸಿಗಳಾದ ಸತೀಶ್ ಹಾಗೂ ಸಂದೀಪ್ ಕುಲಾಲ್ ಎನ್ನುವ ಅಣ್ಣ ತಮ್ಮಂದಿರು ಮೃತಪಟ್ಟ ಘಟನೆ ನಡೆದಿದೆ. ನಂತರ ಅದೇ ಜಾಗದಲ್ಲಿ ಕಾರೋಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.

    ಹಂಪ್ಸ್ -ಬ್ಯಾರಿಕೇಡ್ ಹಾಕಿ: ಎರಡೂ ಕಡೆಯಿಂದ ವೇಗವಾಗಿ ಬರುವ ವಾಹನಗಳ ಚಾಲಕರ ಅಜಾಗರೂಕತೆ ಅಪಘಾತಕ್ಕೆ ಮುಖ್ಯ ಕಾರಣ. ಅಪಘಾತವನ್ನು ತಪ್ಪಿಸಲು ಎರಡೂ ಬದಿಯಲ್ಲಿ ಹಂಪ್ಸ್ ಇಲ್ಲವೇ ಸದ್ಯದ ಮಟ್ಟಿಗೆ ಬ್ಯಾರಿಕೇಡ್ ಹಾಕುವ ಅಗತ್ಯವಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಈ ಸ್ಥಳದಲ್ಲಿ ನಿರಂತರ ಅಪಘಾತಗಳು ನಡೆಯುತ್ತಿವೆ. ಸಾವುನೋವು ನೋಡಿ ಸಾಕಾಗಿದೆ. ಇಷ್ಟು ಅಪಘಾತಗಳು ನಡೆಯುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಇನ್ನೂ ಕೈಗೊಂಡಿಲ್ಲ.
    ಸುರೇಶ್, ಗ್ರಾಮಸ್ಥರು.

    ಬ್ಯಾರಿಕೇಡ್ ಅಥವಾ ಹಂಪ್ಸ್ ನಿರ್ಮಿಸುವ ಬಗ್ಗೆ ಅಧಿಕಾರಿಗಳಿಗೆ ನಾವು ಮನವಿ ಮಾಡುತ್ತೇವೆ.ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಅವರಲ್ಲಿ ವಿನಂತಿಸಿಕೊಳ್ಳುತ್ತೇವೆ.
    ನಿತ್ಯಾನಂದ ಅಮೀನ್, ಅಧ್ಯಕ್ಷರು, ನಂದಳಿಕೆ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts