ಜಪ್ತಿ ವಾಹನಗಳಿಗೆ 24 ಗಂಟೆಯಲ್ಲೇ ಠಾಣೆಯಿಂದ ಮುಕ್ತಿ

|ಕೀರ್ತಿನಾರಾಯಣ ಸಿ.

ಬೆಂಗಳೂರು: ಸಣ್ಣಪುಟ್ಟ ಅಪಘಾತವಾದಾಗಲೂ ವಾಹನ ಜಪ್ತಿ ಮಾಡುವ ಪೊಲೀಸರು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಬೇಕೆಂದೇ ವಿಳಂಬಗೊಳಿಸಿ ಮಾಲೀಕರಿಂದ ಹಣ ವಸೂಲಿ ಮಾಡುವ ಅಡ್ಡದಾರಿ ಇನ್ನುಮುಂದೆ ಬಂದ್ ಆಗಲಿದೆ.

ಜಪ್ತಿ ಮಾಡಿದ ವಾಹನವನ್ನು ಎಲ್ಲ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ 24 ಗಂಟೆ ಒಳಗೆ ಮಾಲೀಕ ಅಥವಾ ಚಾಲಕನಿಗೆ ಬಿಡುಗಡೆ ಮಾಡುವ ನಿಯಮ ಪಾಲಿಸುವಂತೆ ಪೊಲೀಸ್ ಇಲಾಖೆಗೆ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಆಯುಕ್ತ ಡಾ. ಎಂ.ಎ. ಸಲೀಂ ಅವರಿ ಆದೇಶ ಹೊರಡಿಸಿದ್ದಾರೆ. ಇದರನ್ವಯ ರಾಜ್ಯದ ಎಲ್ಲ ಪೊಲೀಸ್ ಆಯುಕ್ತರು, ಅಧೀಕ್ಷಕರು, ಮಹಾನಿರೀಕ್ಷಕರು ಹಾಗೂ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಲಿಖಿತ ಆದೇಶ ಹೊರಡಿಸುವ ಮೂಲಕ ಅಧೀನ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 136 ಪ್ರಕಾರ ಅಪಘಾತಕ್ಕೆ ಒಳಗಾದ ವಾಹನವನ್ನು ವಶಕ್ಕೆ ಪಡೆದ 24 ಗಂಟೆಯಲ್ಲಿ ವಾರಸುದಾರರ ಸುಪರ್ದಿಗೆ ಕೊಡಬೇಕು. ಆದರೆ, ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಈ ನಿಯಮ ಪಾಲಿಸುತ್ತಿಲ್ಲ. ಒಂದು ವೇಳೆ ಜಪ್ತಿಯಾದ 24 ಗಂಟೆಯಲ್ಲಿ ವಾಹನ ಬಿಡುಗಡೆ ಮಾಡದಿದ್ದರೆ ಅಂಥ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದು.

ನಿಯಮಾವಳಿ ಪ್ರಕಾರ ಸಣ್ಣಪುಟ್ಟ ಅಪಘಾತ ಸಂಭವಿಸಿದಾಗ ಸಂಚಾರ ಪೊಲೀಸರು ಆ ವಾಹನಗಳನ್ನು ಜಪ್ತಿ ಮಾಡುವಂತಿಲ್ಲ. ಜಪ್ತಿ ಮಾಡಿದರೆ ಅಪಘಾತವಾದ ತಕ್ಷಣ ಆರ್​ಟಿಒ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ಅವರಿಂದ ವಾಹನದ ಹಾನಿ ಪ್ರಮಾಣ ಮೌಲ್ಯಮಾಪನ ಮಾಡಿಸಿ ಮಾಲೀಕರಿಗೆ ಒಪ್ಪಿಸಬೇಕು.

ಜಪ್ತಿ ಮಾಡಿದ ವಾಹನಗಳನ್ನು ವಿನಾಕಾರಣ ಠಾಣೆ ಎದುರು ನಿಲ್ಲಿಸಿಕೊಂಡು ಹಣಕ್ಕಾಗಿ ಬೇಡಿಕೆ ಇಡುವ ಬಗ್ಗೆ ದೂರುಗಳು ಬಂದಿವೆ. ನಿಯಮದ ಪ್ರಕಾರ 24 ಗಂಟೆಯಲ್ಲಿ ಮಹಜರು ನಡೆಸಿ ವಾರಸುದಾರರಿಗೆ ಕೊಡುವಂತೆ ಸೂಚಿಸಲಾಗಿದೆ.

| ಡಾ.ಎಂ.ಎ. ಸಲೀಂ, ಆಯುಕ್ತ, ಸಂಚಾರ ಮತ್ತು ರಸ್ತೆ ಸುರಕ್ಷತೆ

ಸಚಿವರಿಗೆ ಪತ್ರ ಬರೆದ ವಕೀಲ

ಅಪಘಾತಕ್ಕೆ ಒಳಗಾದ ವಾಹನವನ್ನು ವಶಕ್ಕೆ ಪಡೆದ 24 ಗಂಟೆಯಲ್ಲಿ ಬಿಡುಗಡೆ ಮಾಡದೆ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ಜತೆಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಈ ಕುರಿತು ಸರ್ಕಾರಿ ಆದೇಶ ಹೊರಡಿಸುವಂತೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಡಾ.ಎಂ.ಎ. ಸಲೀಂಗೆ ಸಾಗರ ಮೂಲದ ವಕೀಲ ಕೆ.ವಿ. ಪ್ರವೀಣ ಪತ್ರ ಬರೆದಿದ್ದರು.

ಕ್ರೖೆಂ ಕೇಸಿಗೆ ಸಾಕ್ಷ್ಯವಾದರೆ..

ಅಪರಾಧ ಪ್ರಕರಣಗಳಲ್ಲಿ ಜಪ್ತಿಯಾದ ವಾಹನಗಳನ್ನು ತನಿಖೆ ಪೂರ್ಣಗೊಳ್ಳುವವರೆಗೆ ಬಿಡುಗಡೆ ಮಾಡುವುದಿಲ್ಲ. ತನಿಖೆ ಮುಗಿದ ನಂತರ ಬಿ-ರಿಪೋರ್ಟ್ ಅಥವಾ ಸಿ-ರಿಪೋರ್ಟ್ ಹಾಕಲಾಗುತ್ತದೆ. ವಾಹನ ಸಾಕ್ಷ್ಯಾಧಾರವಾಗಿದ್ದರೆ ನ್ಯಾಯಾಲಯದ ವಿಚಾರಣೆ ಪೂರ್ಣಗೊಂಡು ತೀರ್ಪು ಪ್ರಕಟವಾದ ನಂತರ ಮುಂದಿನ ಕ್ರಮ.

ಮಾಲೀಕರಿಲ್ಲದಿದ್ದರೆ 3 ತಿಂಗಳ ಗಡುವು

ವಾಹನದ ನೋಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ ಆಧರಿಸಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮತ್ತು ಸಾರಿಗೆ ಇಲಾಖೆಗೂ ಮಾಹಿತಿ ಕಳುಹಿಸಲಾಗುತ್ತದೆ. ಆಗಲೂ ವಾರಸುದಾರರ ಪತ್ತೆ ಆಗದಿದ್ದಾಗ ಮಾಲೀಕರಿಲ್ಲದ ವಾಹನ ಎಂದು ನೋಂದಣಿ ಸಂಖ್ಯೆ ನೀಡಿ ಕೋರ್ಟ್ ಅನುಮತಿ ಪಡೆದು ಹರಾಜು ಹಾಕಲಾಗುತ್ತದೆ.