ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಬೆಳ್ತಂಗಡಿ:  ಕಾರ್ಕಳ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ನಾರಾವಿ ಸಮೀಪ ಬುಧವಾರ ಬೆಳಗ್ಗೆ ಬೈಕ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ನಾರಾವಿ ಸಾವ್ಯ ಮಿಯೊಟ್ಟು ನಿವಾಸಿ ಕರಿಯ ಪೂಜಾರಿ-ವಿಜಯ ದಂಪತಿ ಪುತ್ರ ಪ್ರದೀಪ್ ಪೂಜಾರಿ(18) ಮೃತಪಟ್ಟಿದ್ದಾರೆ.

ಬೆಳಗ್ಗೆ 6.30ರ ವೇಳೆಗೆ ಪ್ರದೀಪ್ ತನ್ನ ಸಹೋದರನನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಮನೆಗೆ ವಾಪಸಾಗುತ್ತಿದ್ದಾಗ ನಾರಾವಿ ಸರ್ಕಾರಿ ಆಸ್ಪತ್ರೆ ಸಮೀಪದ ತಿರುವಿನಲ್ಲಿ ಉಡುಪಿ ಕಡೆ ತೆರಳುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ನಾರಾವಿ ಆಸ್ಪತ್ರೆಗೆ ಕೊಂಡೊಯ್ದರೂ ಅದಾಗಲೇ ಮೃತಪಟ್ಟಿದ್ದರು. ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ., ವೇಣೂರು ಎಸ್‌ಐ ನಾಗರಾಜ್ ಭೇಟಿ ನೀಡಿದರು. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂರಿಸಲಾಯಿತು.

ಶೋಕ ಸಾಗರದಲ್ಲಿ ಕುಟುಂಬ: ಸಣ್ಣ ಜಮೀನು ಹೊಂದಿದ್ದು, ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕರಿಯ ಪೂಜಾರಿ ದಂಪತಿಯ ಮೂವರು ಮಕ್ಕಳಲ್ಲಿ ಪ್ರದೀಪ್ ಕೊನೆಯವರು. ಸಹೋದರಿಗೆ ಏಪ್ರಿಲ್‌ನಲ್ಲಿ ವಿವಾಹ ನಿಶ್ಚಯವಾಗಿದ್ದು, ದೀಪಾವಳಿ ಸಂದರ್ಭ ಮದುವೆ ನಿಗದಿಯಾಗಿದೆ. ಸಹೋದರ ಪ್ರಶಾಂತ್ ಉಡುಪಿಯಲ್ಲಿ ಕೆಲಸ್ಕಕಿದ್ದು, ಅವರನ್ನು ಪ್ರದೀಪ್ ಬಸ್ ನಿಲ್ದಾಣಕ್ಕೆ ಬಿಡಲು ತೆರಳಿದ್ದ ಸಂದರ್ಭ ಘಟನೆ ನಡೆದಿದೆ.

ಶ್ರಮಜೀವಿ ಯುವಕ: ಶ್ರಮಜೀವಿಯಾಗಿದ್ದ ಪ್ರದೀಪ್ ಬಜಗೋಳಿ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಐಟಿಐ ಓದಲು ತಯಾರಿ ನಡೆಸುತ್ತಿದ್ದರು. ರಜಾ ದಿನಗಳಲ್ಲಿ ಪೈಂಟಿಂಗ್ ಕೆಲಸಕ್ಕೆ ಹೋಗಿ ಶಿಕ್ಷಣದ ಖರ್ಚಿಗೆ ಹಣ ಹೊಂದಿಸುತ್ತಿದ್ದರು. ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಕುಟುಂಬ ಸದಸ್ಯನ ಸಾವಿನ ಸುದ್ದಿ ಕೇಳಿ ನೂರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು. ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.

Leave a Reply

Your email address will not be published. Required fields are marked *