ಅಪಘಾತಕ್ಕೀಡಾಗಿದ್ದ ವಾನರ ಮರಿಗೆ ಮರುಜೀವ

ಶಿವಮೊಗ್ಗ: ಮಲೆನಾಡು ವನ್ಯಜೀವಿ ಪ್ರತಿಷ್ಠಾನದ ಯುವಕರು ಅಪಘಾತಕ್ಕೀಡಾಗಿದ್ದ ಮಂಗನ ಮರಿ ರಕ್ಷಿಸಿ ಮಾನವೀಯತೆ ಮರೆದಿದ್ದಾರೆ. ಸಾಗರ ರಸ್ತೆಯ ಹುಲಿ ಮತ್ತು ಸಿಂಹಧಾಮ ಬಳಿ ಕಾರು ಡಿಕ್ಕಿ ಹೊಡೆದು ನಿತ್ರಾಣಗೊಂಡಿದ್ದ ಮಂಗನ ಮರಿಗೆ ನೀರು ಕುಡಿಸಿ ಮರುಜೀವ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ತ್ಯಾವರೆಕೊಪ್ಪ ಗ್ರಾಮದ ಬಳಿ ರಸ್ತೆ ದಾಟುತ್ತಿದ್ದ ಮಂಗನ ಮರಿಗೆ ಮಾರುತಿ ಓಮ್ನಿ ಡಿಕ್ಕಿ ಹೊಡೆದಿತ್ತು. ಘಟನೆಯಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಂಗನ ಮರಿಯನ್ನು ಮಲೆನಾಡು ವನ್ಯಜೀವಿ ಪ್ರತಿಷ್ಠಾನದ ದಿಲೀಪ್ ನಾಡಿಗ್ ಹಾಗೂ ಆತನ ಸ್ನೇಹಿತರು ರಕ್ಷಿಸಿದ್ದಾರೆ.

ಮರಿಗೆ ನೀರು ಕುಡಿಸಿ, ತಲೆ ಮೇಲೆ ನೀರು ಹಾಕಿ ತಟ್ಟಿ ಮರುಜೀವ ನೀಡಿದ್ದಾರೆ. ನೀರು ಕುಡಿದು ಕೆಲ ಸಮಯದಲ್ಲೇ ಸುಧಾರಿಸಿಕೊಂಡ ಮರಿ ಮತ್ತೆ ನಡೆಯುವಂತಾಗಿದೆ.

ಬಳಿಕ ಅಲ್ಲಿಯೇ ಇದ್ದ ಇತರೆ ಮಂಗಗಳು ಮರಿಯನ್ನು ಕರೆದುಕೊಂಡು ಕಾಡಿನೊಳಕ್ಕೆ ತೆರಳಿದವು. ಇದನ್ನು ಅವರಲ್ಲೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ವೈರಲ್ ಆಗಿದೆ.