ಜೀವರಕ್ಷಕರಿಗಿನ್ನು ಕಾನೂನು ಕವಚ

ನವದೆಹಲಿ: ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವಾಗುವ ರಾಜ್ಯದ ಜೀವರಕ್ಷಕರಿಗಿನ್ನು ಕಾನೂನಿನ ರಕ್ಷಣಾ ಕವಚ ಸಿಗಲಿದೆ. ರಸ್ತೆ ಬದಿ ನರಳಾಡುತ್ತ ಸಾವು, ಬದುಕಿನ ನಡುವೆ ಹೋರಾಡುವ ಗಾಯಾಳುಗಳಿಗೆ ನೆರವು ನೀಡುವವರಿಗೆ ಕೋರ್ಟ್, ಕಚೇರಿ, ಪೊಲೀಸ್ ಠಾಣೆ ಅಲೆದಾಟದ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ರೂಪಿಸಲಾ ಗಿರುವ ಕರ್ನಾಟಕ ಜೀವರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅಂಕಿತ ಹಾಕಿದ್ದಾರೆ. ಆ ಮೂಲಕ ಜೀವರಕ್ಷಕರಿಗೆ ಕಾನೂನು ರಕ್ಷಣೆ ಒದಗಿಸಿದ ದೇಶದ ಮೊದಲ ರಾಜ್ಯ ಎಂಬ ಹಿರಿಮೆ ರಾಜ್ಯದ ಮುಡಿಗೇರಿದೆ.

ಕೇಂದ್ರದ ಕಾಯ್ದೆಯಿಲ್ಲ

ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವವರಿಗೆ ರಕ್ಷಣೆ ನೀಡುವ ಕುರಿತು ಕೇಂದ್ರ ಸರ್ಕಾರ ಯಾವುದೇ ಕಾಯ್ದೆ ರೂಪಿಸಿಲ್ಲ. ಆದರೆ, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸಾರಿಗೆ ಸಚಿವಾಲಯ 2015ರಲ್ಲಿ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆ.

ಕಾಯ್ದೆ ಉದ್ದೇಶ

2015 ಮತ್ತು 2016ರಲ್ಲಿ ಅತಿಹೆಚ್ಚು ರಸ್ತೆ ಅಪಘಾತಗಳಾದ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿತ್ತು. ಕೋರ್ಟ್-ಕಚೇರಿ ಅಲೆದಾಟಕ್ಕೆ ಹೆದರಿ ಗಾಯಾಳುಗಳಿಗೆ ನೆರವಾಗಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದ ಪರಿಣಾಮ ಗೋಲ್ಡನ್ ಅವರ್​ನಲ್ಲಿ ಆಸ್ಪತ್ರೆ ತಲುಪಲಾಗದೆ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು. 2015ರಲ್ಲಿ ರಾಷ್ಟ್ರದಲ್ಲಿ ಸಂಭವಿಸಿದ್ದ 5.01 ಲಕ್ಷ ಅಪಘಾತಗಳಲ್ಲಿ 1.46 ಲಕ್ಷ ಜನರು ಮತ್ತು 2016ರಲ್ಲಿ 4.80 ಅಪಘಾತಗಳಲ್ಲಿ 1.50 ಲಕ್ಷ ಜನರು ಅಸುನೀಗಿದ್ದರು. ಕ್ಷಿಪ್ರ ಅವಧಿಯಲ್ಲಿ ವೈದ್ಯಕೀಯ ನೆರವು ಸಿಕ್ಕಿದ್ದರೆ ಒಂದಷ್ಟು ಜನರು ಬದುಕುಳಿಯುವ ಸಾಧ್ಯತೆ ಇತ್ತು.

ಏನಿದೆ ಕಾಯ್ದೆಯಲ್ಲಿ?

ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಕ್ಷಿಪ್ರ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ದೊರೆಯುವಂತೆ ಮಾಡುವವರು ಇನ್ಮುಂದೆ ಪೊಲೀಸರು ಅಥವಾ ತನಿಖೆಗೆ ಹೆದರಬೇಕಿಲ್ಲ. ಈ ಕಾಯ್ದೆ ಪ್ರಕಾರ ಸಕಾಲದಲ್ಲಿ ಗಾಯಾಳುಗಳಿಗೆ ನೆರವು ನೀಡಿದವರಿಗೆ ಕರ್ನಾಟಕ ಸರ್ಕಾರ ಆರ್ಥಿಕ ನೆರವನ್ನೂ ಒದಗಿಸಲಿದೆ. ಒಂದು ವೇಳೆ ಗಾಯಾಳುಗಳಿಗೆ ನೆರವಾಗುವವರು ಕೋರ್ಟ್ ಅಥವಾ ಪೊಲೀಸ್ ಠಾಣೆಗೆ ಹಾಜರಾಗುವ ಅನಿವಾರ್ಯತೆ ಬಂದರೆ ಅವರ ಖರ್ಚುವೆಚ್ಚ ಭರಿಸಲಾಗುತ್ತದೆ.

  • ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ನೆರವು ನೀಡಿದವರು ತಕ್ಷಣವೇ ನಿರ್ಗಮಿಸಬಹುದು.
  • ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ವೈದ್ಯರು ಗಾಯಾಳುವನ್ನು ದಾಖಲಿಸಿಕೊಂಡು ಪ್ರಥಮ ಚಿಕಿತ್ಸೆ ಕೊಡುವುದು ಕಡ್ಡಾಯ.

ಕಾಯ್ದೆ ರೂಪಿಸಿದ ರಾಜ್ಯಕ್ಕೆ ಹೆಮ್ಮೆ

ಬೆಂಗಳೂರು: ಕೆಎಸ್​ಆರ್​ಟಿಸಿ ಭದ್ರತಾ ಸಿಬ್ಬಂದಿಯೊಬ್ಬರು ಬೆಂಗಳೂರಿನ ಮೈಸೂರು ರಸ್ತೆಯ ಮೇಲ್ಸೇತುವೆಯಲ್ಲಿ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದರೂ ಯಾವೊಬ್ಬ ದಾರಿಹೋಕರೂ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾಳಜಿ, ಔದಾರ್ಯ ತೋರಿಸಿರಲಿಲ್ಲ, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೈಕ್ ಅಪಘಾತಕ್ಕೀಡಾಗಿ ಯುವಕನೊಬ್ಬ ಬಿದ್ದು ಒದ್ದಾಡಿದರೂ ಕಿಕ್ಕಿರಿದು ನೆರೆದಿದ್ದ ಜನರ ಪೈಕಿ ಒಬ್ಬರೂ ಮುಂದೆ ಬಂದು ಆಸ್ಪತ್ರೆಗೆ ಸೇರಿಸಲಿಲ್ಲ. ಬದಲಾಗಿ ಸನ್ನಿವೇಶದ ಫೋಟೋ, ವೀಡಿಯೋ ತೆಗೆದುಕೊಳ್ಳುವುದರಲ್ಲಿಯೇ ನಿರತರಾಗಿದ್ದರು.

ಇನ್ನು ಬೇರೆ ಬೇರೆ ರಾಜ್ಯಗಳಿಂದ ವ್ಯಾಪಾರ ಮತ್ತಿತರ ಕಾರಣಗಳಿಗೆ ರಾಜ್ಯಕ್ಕೆ ಬಂದು ಅಪಘಾತಕ್ಕೀಡಾದಲ್ಲಿ ಇವರ ಚಿಕಿತ್ಸಾ ವೆಚ್ಚದ ಹೊಣೆ ಹೊರುವವರು ಯಾರು? ಆಸ್ಪತ್ರೆಗೆ ದಾಖಲಿಸುವವರು ಜವಾಬ್ದಾರಿ ತೆಗೆದುಕೊಳ್ಳುವುದಾದರೂ ಹೇಗೆ? ಆಸ್ಪತ್ರೆಗೆ ಕರೆತಂದವರೇ ಚಿಕಿತ್ಸಾ ವೆಚ್ಚ ಪಾವತಿಸಬೇಕಿತ್ತು. ಹಣ ಪಾವತಿಸದೇ ಇದ್ದರೆ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದವು. ಈ ಎಲ್ಲ ಪ್ರಶ್ನೆಗಳು ಹಿಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರನ್ನು ಕಾಡಿದವು. ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕೆಂದು ಆಲೋಚಿಸಿದ್ದರ ಫಲವೇ ಕರ್ನಾಟಕ ಗುಡ್ ಸಮಾರಿಟನ್ ಆಂಡ್ ಮೆಡಿಕಲ್ ಪ್ರೊಫೆಷನಲ್ ಬಿಲ್ ಜನ್ಮ ತಾಳಿತು. ಈ ಕಾಯ್ದೆಯಡಿ ಆಸ್ಪತ್ರೆಗೆ ದಾಖಲಾಗುವ ವ್ಯಕ್ತಿಗೆ 48 ಗಂಟೆ ಅವಧಿಯ ಚಿಕಿತ್ಸಾ ವೆಚ್ಚ 25 ಸಾವಿರ ರೂ.ಗಳನ್ನು ಸರ್ಕಾರವೇ ಭರಿಸುತ್ತದೆ. ರಾಜ್ಯ ಸರ್ಕಾರ ‘ಕರ್ನಾಟಕ ಪರೋಪಕಾರ ಮತ್ತು ವೈದ್ಯಕೀಯ ವೃತ್ತಿಪರ ಕಾಯ್ದೆ 2016’ ದೇಶಕ್ಕೆ ಮಾದರಿಯಾಗಿದೆ. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದು ರಾಜ್ಯಕ್ಕೆ ಮತ್ತೊಂದು ಗರಿ ಮೂಡಿಸಿದೆ.

ಅಪಘಾತಕ್ಕೀಡಾದವರ ಜೀವ ಉಳಿಸುವಲ್ಲಿ ಈ ಕಾಯ್ದೆ ಹೆಚ್ಚು ನೆರವಿಗೆ ಬರುತ್ತದೆ. ದೇಶದಲ್ಲೇ ಮೊದಲ ಬಾರಿಗೆ ರೂಪುಗೊಂಡ ಈ ಕಾಯ್ದೆಗೆ ಈಗ ರಾಷ್ಟ್ರಪತಿಗಳು ಅಂಕಿತ ಹಾಕಿರುವುದು ಸಂತಸ ತಂದಿದೆ. ಗೃಹ ಹಾಗೂ ಆರೋಗ್ಯ ಇಲಾಖೆಗಳು ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಒತ್ತು ನೀಡಬೇಕು.

-ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ.